ಭರ್ತಿಯಾಗದ 30 ಲಕ್ಷ ಸರಕಾರಿ ಉದ್ಯೋಗಗಳ ಬಗ್ಗೆ ಬಿಜೆಪಿಗೆ ಅರಿವೇ ಇಲ್ಲ : ಖರ್ಗೆ ಆರೋಪ
ಮಲ್ಲಿಕಾರ್ಜುನ ಖರ್ಗೆ | Photo: PTI
ಹೊಸದಿಲ್ಲಿ: “ಭರ್ತಿಯಾಗದ 30 ಲಕ್ಷ ಸರಕಾರಿ ಹುದ್ದೆಗಳು ಖಾಲಿ ಇವೆ. ಇದರ ಬಗ್ಗೆ ಬಿಜೆಪಿಗೆ ಅರಿವೇ ಇಲ್ಲ” ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸಿ ಮಾತನಾಡಿದ ಅವರು, “ಎಸ್ ಸಿ ಮತ್ತು ಎಸ್ ಟಿ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಸರಕಾರಿ ಸಂಸ್ಥೆಗಳೇ ಪ್ರಮುಖ ಆಧಾರ. ಆದರೆ ಬಿಜೆಪಿಯು ಸರಕಾರಿ ಸ್ವಾಮ್ಯ ಸಂಸ್ಥೆಗಳನ್ನು ಮುಚ್ಚುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದರು.
“ಆಸ್ಪತ್ರೆಗಳನ್ನು ಕಟ್ಟಿಸಿದ್ದೇವೆ ಎಂದು ಸರಕಾರ ಹೇಳುತ್ತಿದೆ. ಏಮ್ಸ್ ನಲ್ಲಿ ಶೇ.41ರಷ್ಟು ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕೆನ್ನುವ ವಿಚಾರ ಯಾಕೆ ಮುಖ್ಯವಾಗುತ್ತಿಲ್ಲ?” ಎಂದು ಪ್ರಶ್ನಿಸಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಅವರು ವಾಯುಸೇನೆ ಮತ್ತು ನೌಕಾಪಡೆಯಲ್ಲಿ ಅಗ್ನಿಪಥ್ ಯೋಜನೆ ಬಗ್ಗೆ ಯಾರನ್ನೂ ಸಂಪರ್ಕಿಸದೇ ಒಬ್ಬರೇ ನಿರ್ಣಯ ತೆಗೆದುಕೊಂಡರು. ಅಗ್ನಿಪಥ್ ಯೋಜನೆಗೆ ಶೇ.75ರಷ್ಟು ಜನರನ್ನು ತೆಗೆದುಕೊಂಡು ಶೇ.25ರಷ್ಟು ಜನರನ್ನು ಬಿಡುಗಡೆಗೊಳಿಸಬೇಕೆಂದು ಜನರಲ್ ಎಂ. ಎಂ. ನರವಣೆ ಹೇಳಿದ್ದರು. ಈಗ ನೋಡಿದರೆ ಯೋಜನೆಯು ತಲೆಕೆಳಗಾಗಿದೆ”, ಎಂದು ಅವರು ಅಭಿಪ್ರಾಪಟ್ಟರು.
“ಬೆಲೆ ಏರಿಕೆಯ ಬಗ್ಗೆ ಮೋದಿ ಸರಕಾರ ಎಂದಿಗೂ ಮಾತನಾಡುವುದಿಲ್ಲ. ಅಗತ್ಯ ವಸ್ತುಗಳ ಬೆಲೆಯು ದ್ವಿಗುಣಗೊಂಡಿದೆ. ಕನಿಷ್ಠ ಬೆಂಬಲ ಬೆಲೆ ಮೂಲಕ ರೈತರ ಆದಾಯ ದ್ವಿಗುಣಗೊಳಿಸುವ ಬಗ್ಗೆ ಮಾತನಾಡುವ ಪ್ರಧಾನಿ, ಇಂದು ರೈತರ ಆದಾಯ ಶೇ.1.5ರಷ್ಟು ಕುಸಿದಿರು ವಿಚಾರ ತಿಳಿದಿಲ್ಲ ”ಎಂದು ಮಲ್ಲಿಕಾರ್ಜುನ ಖರ್ಗೆಯವರು ಬೇಸರ ವ್ಯಕ್ತಪಡಿಸಿದ್ದಾರೆ.