ನಕ್ಸಲೀಯರಿಂದ ಬಸ್ತರ್ ನಲ್ಲಿ ಬಿಜೆಪಿ ಮುಖಂಡನ ಹತ್ಯೆ
ರಾಯಪುರ: ಬಸ್ತರ್ ನ ಬಿಜಾಪುರ ಜಿಲ್ಲೆಯಲ್ಲಿ ವಿವಾಹ ಸಮಾರಂಭವೊಂದರಿಂದ ತೆರಳುತ್ತಿದ್ದ ಬಿಜೆಪಿ ಮುಖಂಡರೊಬ್ಬರನ್ನು ನಕ್ಸಲೀಯರು ಶುಕ್ರವಾರ ರಾತ್ರಿ ಹತ್ಯೆ ಮಾಡಿದ್ದಾರೆ. ತಿರುಪತಿ ಕಾಟ್ಲಾ (40) ಎಂಬವರು ನಕ್ಸಲೀಯರಿಂದ ಹತ್ಯೆಗೀಡಾಗಿದ್ದು, ಇವರು ಕಳೆದ ಒಂದು ವರ್ಷದಲ್ಲಿ ನಕ್ಸಲೀಯರಿಂದ ಹತ್ಯೆಗೀಡಾದ ಎಂಟನೇ ಮುಖಂಡರಾಗಿದ್ದಾರೆ. ಬಿಜೆಪಿ ಕಳೆದ ಡಿಸೆಂಬರ್ ನಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮೊದಲ ಹತ್ಯೆ ಇದಾಗಿದೆ.
ಕಾಟ್ಲಾ ಜನ್ ಪದ್ ಪಂಚಾಯ್ತಿಯ ಸದಸ್ಯರಾಗಿದ್ದು, ಬಿಜಾಪುರ ಜಿಲ್ಲಾಕೇಂದ್ರದಲ್ಲಿ ವಾಸವಿದ್ದರು. ಶುಕ್ರವಾರ ರಾತ್ರಿ ಮಹಾರಾಷ್ಟ್ರ ಗಡಿಗೆ ಸಮೀಪದ ತೊಯ್ನಾರ್ ಎಂಬ ಗ್ರಾಮದಿಂದ ಮರಳುತ್ತಿದ್ದಾಗ ಈ ದಾಳಿ ನಡೆದಿದೆ. ದಾರಿಯಲ್ಲಿ ಹೊಂಚುಹಾಕಿ ನಕ್ಸಲೀಯರು ದಾಳಿ ನಡೆಸಿದ್ದಾರೆ. ಐದರಿಂದ ಏಳು ಮಂದಿ ನಕ್ಸಲೀಯರು ಹರಿತವಾದ ಆಯುಧಗಳಿಂದ ಹತ್ಯೆಗೈದು ಪರಾರಿಯಾಗಿದ್ದಾರೆ. ದಾರಿಹೋಕರು ಅವರನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಅವರ ಜೀವರಕ್ಷಣೆ ಸಾಧ್ಯವಾಗಲಿಲ್ಲ.
"ಈ ಹತ್ಯೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವ ನಿರೀಕ್ಷೆ ಇದೆ. ಕೋಟ್ಲಾ ಅವರ ಒಬ್ಬ ಸಹೋದರ ಪೊಲೀಸ್ ಇಲಾಖೆಯಲ್ಲಿದ್ದು, ಬಿಜಾಪುರ ಬಳಿ ಕರ್ತವ್ಯದಲ್ಲಿದ್ದಾರೆ ಎಂದು ಎಸ್ಪಿ ಜಿತೇಂದ್ರ ಕುಮಾರ್ ಯಾದವ್ ಹೇಳಿದ್ದಾರೆ. ಸಿಎಂ ವಿಷ್ಣುದೇವ ಸಾಯಿ ಅವರು ತಿರುಪತಿ ಕಾಟ್ಲಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
"ಬಿಜೆಪಿಯ ಬಿಜಾಪುರ ಸಹಕಾರ ವಿಭಾಗದ ಸಂಚಾಲಕರಲ್ಲೊಬ್ಬರಾಗಿದ್ದ ತಿರುಪತಿ ಕಾಟ್ಲಾ ನಿಧನದಿಂದ ತೀರಾ ಬೇಸರವಾಗಿದೆ. ಇದು ನಕ್ಸಲೀಯರ ಪೈಶಾಚಿಕ ಕೃತ್ಯ. ನಕ್ಸಲೀಯರ ವಿರುದ್ಧದ ನಮ್ಮ ಹೋರಾಟ ನಿರ್ಣಾಯಕ ಹಂತದಲ್ಲಿದೆ. ಅವರ ಯೋಜನೆಗಳು ಮುಂದುವರಿಯಲು ಅವಕಾಶ ನೀಡುವುದಿಲ್ಲ" ಎಂದು ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.