ಬಿಜೆಪಿ ನಾಯಕರು ವ್ಯಾಟ್ಸ್ಆ್ಯಪ್ ವಿವಿಯಂತೆ ವರ್ತಿಸುತ್ತಿದ್ದಾರೆ: ಸ್ಟಾಲಿನ್
ಎಂ.ಕೆ. ಸ್ಟಾಲಿನ್ | Photo: X
ಚೆನ್ನೈ: ಬಿಜೆಪಿಯ ಹಿರಿಯ ನಾಯಕರು ‘‘ವ್ಯಾಟ್ಸ್ ಆ್ಯಪ್ ವಿಶ್ವವಿದ್ಯಾನಿಲಯ’’ದಂತೆ ವರ್ತಿಸುತ್ತಿದ್ದಾರೆ ಹಾಗೂ ವದಂತಿಗಳನ್ನು ಹರಡುತ್ತಿದ್ದಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೋಮವಾರ ಹೇಳಿದ್ದಾರೆ.
ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ನೇರ ಪ್ರಸಾರವನ್ನು ತಮಿಳುನಾಡು ಸರಕಾರ ನಿಷೇಧಿಸಿದೆ ಎಂಬ ವರದಿಯ ಕುರಿತಂತೆ ಆಡಳಿತಾರೂಢ ಡಿಎಂಕೆ ಹಾಗೂ ಬಿಜೆಪಿ ನಡುವಿನ ವಾಕ್ಸಮರದ ನಡುವೆ ಎಂ.ಕೆ. ಸ್ಟಾಲಿನ್ ಅವರು ಈ ಹೇಳಿಕೆ ನೀಡಿದ್ದಾರೆ.
ಡಿಎಂಕೆಯ ಯುವ ಘಟಕದ ಸಮಾವೇಶದಿಂದ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ವದಂತಿ ಹಬ್ಬಿಸುತ್ತಿದೆ ಎಂದು ಸ್ಟಾಲಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಶೇಷ ಪೂಜೆ, ಅನ್ನದಾನ ಹಾಗೂ ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ನೇರ ಪ್ರಸಾರಕ್ಕೆ ಡಿಎಂಕೆ ನಿರ್ಬಂಧ ವಿಧಿಸಿದೆ ಎಂದು ಬಿಜೆಪಿ ಆರೋಪಿಸಿತ್ತು. ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ನೇರ ಪ್ರಸಾರಕ್ಕೆ ತಮಿಳುನಾಡಿನ ಕಾಮಾಕ್ಷಿ ಅಮ್ಮನ್ ದೇವಾಲಯದಲ್ಲಿ ಅಳವಡಿಸಲಾದ ಎಲ್ ಇ ಡಿ ಪರದೆಯನ್ನು ತೆರವುಗೊಳಿಸಲಾಗಿದೆ ಎಂದು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ ಬಳಿಕ ಈ ವಾಕ್ಸಮರ ಆರಂಭವಾಗಿತ್ತು.
ಇಂತಹ ಘಟನೆಗಳನ್ನು ತಡೆಯುವಂತೆ ಪೊಲೀಸ್ ಅಧೀಕ್ಷಕರಿಗೆ ಮೌಖಿಕ ಸೂಚನೆ ನೀಡಲಾಗಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಪ್ರತಿಪಾದಿಸಿದ್ದರು.