ವಕ್ಫ್ (ತಿದ್ದುಪಡಿ) ಮಸೂದೆಯ ಜಂಟಿ ಸಂಸದೀಯ ಸಮಿತಿ | ಎನ್ಡಿಎ ಮಿತ್ರರ ತಿದ್ದುಪಡಿ ಅಂಗೀಕಾರ; ವಿಪಕ್ಷಗಳ ಶಿಫಾರಸ್ಸಿಗೆ ನಕಾರ!

Photo: NDTV
ಹೊಸದಿಲ್ಲಿ : ವಕ್ಫ್ (ತಿದ್ದುಪಡಿ) ಮಸೂದೆಯನ್ನು ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿಯು ಸೋಮವಾರ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್ಡಿಎ ಸದಸ್ಯರು ಪ್ರಸ್ತಾಪಿಸಿದ ಎಲ್ಲಾ ತಿದ್ದುಪಡಿಗಳನ್ನು ಅಂಗೀಕರಿಸಿತು. ವಿರೋಧ ಪಕ್ಷದ ಸದಸ್ಯರು ಪ್ರಸ್ತಾಪಿಸಿದ ಎಲ್ಲಾ ತಿದ್ದುಪಡಿಗಳನ್ನು ತಿರಸ್ಕರಿಸಿದೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ
ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಸಮಿತಿ ಅಂಗೀಕರಿಸಿದ ತಿದ್ದುಪಡಿಗಳು ಕಾನೂನನ್ನು ಉತ್ತಮ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ ಎಂದು ಹೇಳಿದರು.
ವಿರೋಧ ಪಕ್ಷದ ಸಂಸದರು ಸಭೆಯ ನಡಾವಳಿಗಳನ್ನು ಖಂಡಿಸಿದರು. ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ಮಾತನಾಡಿದ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಸರ್ವಾಧಿಕಾರಿ ರೀತಿಯಲ್ಲಿ ವರ್ತಿಸಿದ್ದಾರೆ. ಅವರು ನಮ್ಮ ಮಾತನ್ನು ಕೇಳಲಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.
ಜಗದಾಂಬಿಕಾ ಪಾಲ್ ಆರೋಪವನ್ನು ತಿರಸ್ಕರಿಸಿದ್ದಾರೆ. ಜಂಟೀ ಸಂಸದೀಯ ಸಮಿತಿಯ ಸಂಪೂರ್ಣ ಸಭೆಗಳು ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ನಡೆದಿದೆ. ಬಹುಮತದ ಅಭಿಪ್ರಾಯ ಸಭೆಯಲ್ಲಿ ಮೇಲುಗೈ ಸಾಧಿಸಿದೆ ಎಂದು ಹೇಳಿದರು. ಎನ್ ಡಿ ಎ ಮಿತ್ರ ಪಕ್ಷಗಳ ಸದಸ್ಯರು ಪ್ರಸ್ತಾಪಿಸಿದ 14 ತಿದ್ದುಪಡಿಗಳನ್ನು ಅಂಗೀಕರಿಸಲಾಗಿದೆ. ವಿಪಕ್ಷಗಳು ಮಂಡಿಸಿದ 44 ತಿದ್ದುಪಡಿಗಳನ್ನು ಮತಗಳ ಆಧಾರದ ಮೇಲೆ ತಿರಸ್ಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ.