ದಿಲ್ಲಿಯನ್ನು ‘‘ಭಾರತದ ಅಪರಾಧ ರಾಜಧಾನಿ’’ಯಾಗಿ ಮಾಡುತ್ತಿರುವ ಬಿಜೆಪಿ: ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್ | PTI
ಹೊಸದಿಲ್ಲಿ: ಬಿಜೆಪಿ ವಿರುದ್ಧ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಅದು ದಿಲ್ಲಿಯನ್ನು ‘‘ಭಾರತದ ಅಪರಾಧ ರಾಜಧಾನಿ’’ಯಾಗಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ದಿಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಅವರು, ‘‘ದಿಲ್ಲಿಯ ಬಗ್ಗೆ ಬಿಜೆಪಿ ಹೊಂದಿರುವ ನಿರ್ಲಕ್ಷ್ಯ ಮತ್ತು ದ್ವೇಷವೇ ಅದು 25 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬರದಿರಲು ಕಾರಣ ಎಂದು ಅಭಿಪ್ರಾಯಪಟ್ಟರು.
ಹೆಚ್ಚುತ್ತಿರುವ ದರೋಡೆಗಳು, ಸರಗಳ್ಳತನಗಳು ಮತ್ತು ಗ್ಯಾಂಗ್ವಾರ್ಗಳನ್ನು ಉಲ್ಲೇಖಿಸಿದ ಕೇಜ್ರಿವಾಲ್, ಮಹಿಳೆಯರು ಮನೆಯಿಂದ ಹೊರಗೆ ಕಾಲಿಡುವುದು ಸುರಕ್ಷಿತವಲ್ಲ ಎಂಬ ಪರಿಸ್ಥಿತಿ ಏರ್ಪಟ್ಟಿದೆ ಎಂದು ಹೇಳಿದರು.
ಈ ಬಾರಿ ಆಪ್ ಅಧಿಕಾರಕ್ಕೆ ಮರಳಿದರೆ, ಖಾಸಗಿ ಭದ್ರತಾ ಕಾವಲುಗಾರರನ್ನು ನೇಮಿಸಲು ನಿವಾಸಿಗಳ ಕಲ್ಯಾಣ ಸಂಘ (ಆರ್ಡಬ್ಲ್ಯುಎ)ಗಳಿಗೆ ಹಣಕಾಸು ನೆರವು ನೀಡಲಾಗುವುದು ಎಂದು ಅವರು ಘೋಷಿಸಿದರು. ಈಗಾಗಲೇ ನಿಯೋಜನೆಯಾಗಿರುವ ಪೊಲೀಸ್ ಪಡೆಯನ್ನು ತೆಗೆಯದೆಯೇ ಖಾಸಗಿ ಕಾವಲುಗಾರರನ್ನು ನೇಮಿಸುವ ಯೋಜನೆ ಇದಾಗಿದೆ ಎಂದು ಅವರು ತಿಳಿಸಿದರು.
►ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಾರು?: ಆತಿಶಿ
ದಿಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ, ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದಿರುವುದಕ್ಕಾಗಿ ದಿಲ್ಲಿ ಮುಖ್ಯಮಂತ್ರಿ ಆತಿಶಿ ಶುಕ್ರವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದಾಗಿ ರಾಷ್ಟ್ರ ರಾಜಧಾನಿಯ ಜನರು ಕೇಳುತ್ತಿದ್ದಾರೆ ಎಂದು ಅವರು ಹೇಳಿದರು.
ಫೆಬ್ರವರಿ 5ರಂದು ನಡೆಯಲಿರುವ ಚುನಾವಣೆಯಲ್ಲಿ ಆಪ್ ಗೆದ್ದರೆ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಆತಿಶಿ ಪುನರುಚ್ಚರಿಸಿದರು.
ತಾನು ಸ್ಪರ್ಧಿಸುತ್ತಿರುವ ಕಲ್ಕಾಜಿ ಕ್ಷೇತ್ರದಲ್ಲಿ ತನ್ನ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ರಮೇಶ್ ಬಿದೂರಿಯೇ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಇಂಗಿತವನ್ನು ಅವರು ವ್ಯಕ್ತಪಡಿಸಿದರು. ತಾನು ಗೆದ್ದರೆ ಕಲ್ಕಾಜಿ ಕ್ಷೇತ್ರದ ರಸ್ತೆಗಳನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯ ಕೆನ್ನೆಗಳಂತೆ ಮಾಡುತ್ತೇನೆ ಎಂಬುದಾಗಿ ಇತ್ತೀಚೆಗೆ ಹೇಳುವ ಮೂಲಕ ಅವರು ವಿವಾದವೊಂದನ್ನು ಸೃಷ್ಟಿಸಿದ್ದರು. ಅದೂ ಅಲ್ಲದೆ, ಮುಖ್ಯಮಂತ್ರಿ ಆತಿಶಿ ತನ್ನ ತಂದೆಯನ್ನು ಬದಲಿಸಿದ್ದಾರೆ ಎಂಬ ಅತ್ಯಂತ ಆಕ್ಷೇಪಾರ್ಹ ಹೇಳಿಕೆಯನ್ನೂ ನೀಡಿದ್ದರು.
‘‘ಬಿಜೆಪಿಯ ಕೋರ್ ಕಮಿಟಿ ಸಭೆಯು ನಡೆಯುತ್ತಿದೆ. ಅತ್ಯಂತ ಕೆಟ್ಟದಾಗಿ ಮಾತನಾಡುವ ಓರ್ವ ನಾಯಕನನ್ನು (ರಮೇಶ್ ಬಿದೂರಿ) ಅದು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆರಿಸಲಿದೆ ಎನ್ನುವುದು ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ’’ ಎಂದು ಆತಿಶಿ ಹೇಳಿದರು.