ಬಿಹಾರ, ಪಂಜಾಬ್ ಚುನಾವಣೆ ಮೇಲೆ ಬಿಜೆಪಿಯ ಕಣ್ಣು; ದಿಲ್ಲಿಗೆ ಇಬ್ಬರು ಉಪ ಮುಖ್ಯಮಂತ್ರಿಗಳ ಆಯ್ಕೆ ಸಾಧ್ಯತೆ

ಸಾಂದರ್ಭಿಕ ಚಿತ್ರ (PTI)
ಹೊಸ ದಿಲ್ಲಿ: ಮುಂದಿನ ದಿಲ್ಲಿ ಮುಖ್ಯಮಂತ್ರಿ ನೇಮಕ ಕುರಿತು ಚರ್ಚೆಗಳು ಬಿರುಸು ಪಡೆದಿದ್ದು, ಇದೇ ವೇಳೆ, ಸಚಿವ ಸಂಪುಟವನ್ನು ಅಂತಿಮಗೊಳಿಸುವಾಗ ಆಪ್ ಆಡಳಿತವಿರುವ ಪಂಜಾಬ್ ಹಾಗೂ ಚುನಾವಣಾ ರಾಜ್ಯವಾದ ಬಿಹಾರಕ್ಕೆ ಸಂದೇಶ ರವಾನಿಸಲು ಬಿಜೆಪಿ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ನೇಮಿಸುವ ಸಾಧ್ಯತೆಯೂ ಇದೆ ಎಂದು ವರದಿಯಾಗಿದೆ.
ಮಂಗಳವಾರ ನೂತನವಾಗಿ ಚುನಾಯಿತರಾಗಿರುವ ಬಿಜೆಪಿ ಶಾಸಕರ ಗುಂಪೊಂದು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಭೇಟಿ ಮಾಡಿತು. ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಹಾಗೂ ಅಮೆರಿಕ ಭೇಟಿಯಿಂದ ಮರಳಿ ಬಂದ ನಂತರವಷ್ಟೇ ಹೊಸ ಸಚಿವ ಸಂಪುಟ ರಚನೆ ಅಂತಿಮಗೊಳ್ಳುವ ಸಾಧ್ಯತೆ ಇದ್ದರೂ, 27 ವರ್ಷಗಳ ನಂತರ, ಯಶಸ್ವಿಯಾಗಿ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಕ್ಕೆ ಮರಳಿರುವ ಬಿಜೆಪಿಯು, ಹಲವಾರು ಆಯ್ಕೆಗಳ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ ಎಂದು ಹೇಳಲಾಗಿದೆ.
ಬಿಜೆಪಿಯು ಸುದೀರ್ಘ ಕಾಲದಿಂದ ಪಂಜಾಬ್ ನಲ್ಲಿ ನೆಲೆಯೂರಲಾಗಿಲ್ಲ. ಭಗವಂತ್ ಸಿಂಗ್ ಮಾನ್ ನೇತೃತ್ವದ ಆಪ್ ಸರಕಾರ ಸದ್ಯ ಪಂಜಾಬ್ ನಲ್ಲಿ ಸ್ಪಷ್ಟ ಬಹುಮತವನ್ನು ಹೊಂದಿದ್ದು, ಕಾಂಗ್ರೆಸ್ ಪ್ರಮುಖ ವಿರೋಧ ಪಕ್ಷವಾಗಿದೆ. ಪಂಜಾಬ್ ನಲ್ಲಿ ನೆಲೆಯೂರಲು ಬಿಜೆಪಿ ಹಾಗೂ ಅದರ ಸೈದ್ಧಾಂತಿಕ ಮಾತೃ ಸಂಸ್ಥೆಯಾದ ಆರೆಸ್ಸೆಸ್ ಗೆ ಕ್ಲಿಷ್ಟವಾಗಿ ಪರಿಣಮಿಸಿದೆ. ರೈತರ ಹೋರಾಟದ ತೀವ್ರತೆಯ ಕಾರಣಕ್ಕೆ ಅಕಾಲಿ ದಳ ಕೂಡಾ ಬಿಜೆಪಿಯನ್ನು ತೊರೆದಿದ್ದು, ಅದರ ಬಳಿಯೀಗ ಯಾವುದೇ ಪ್ರಮುಖ ಕ್ಷೇತ್ರವಾಗಲಿ ಅಥವಾ ಮೈತ್ರಿ ಪಕ್ಷವಾಗಲಿ ಇಲ್ಲ.
ಹೀಗಾಗಿ, ಸಿಖ್ ಮತದಾರರನ್ನು ಸೆಳೆಯಲು ಮಾಜಿ ಅಕಾಲಿ ದಳ ನಾಯಕ ಹಾಗೂ ದಿಲ್ಲಿ ಗುರುದ್ವಾರ ಪ್ರಬಂಧಕ ಸಮಿತಿಯ ಮುಖ್ಯಸ್ಥ, ರಜೌರಿ ಗಾರ್ಡನ್ ಕ್ಷೇತ್ರದ ಶಾಸಕ ಮಂಜಿಂದರ್ ಸಿಂಗ್ ಸಿರ್ಸಾರನ್ನು ಸಿಖ್ ಪ್ರತಿನಿಧಿಯನ್ನಾಗಿ ಸಂಪುಟಕ್ಕೆ ಸೇರ್ಪಡೆ ಮಾಡಲು ಬಿಜೆಪಿ ಚಿಂತನೆ ನಡೆಸುತ್ತಿದೆ. ಅಲ್ಲದೆ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ನೇಮಿಸುವ ಕುರಿತೂ ಆಲೋಚಿಸುತ್ತಿದೆ ಎಂದು ಹೇಳಲಾಗಿದೆ.
ಡಿಸೆಂಬರ್ 2025ರಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯ ಮೇಲೂ ಕಣ್ಣು ನೆಟ್ಟಿರುವ ಬಿಜೆಪಿ, ಮತ್ತೊಬ್ಬ ಉಪ ಮುಖ್ಯಮಂತ್ರಿ ನೇಮಕವನ್ನು ಪರಿಗಣಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ತನ್ನ ಮಿತ್ರ ಪಕ್ಷವಾಗಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯುನೊಂದಿಗೆ ಬಿಜೆಪಿ ಹಲವಾರು ಬಾರಿ ಸರಕಾರ ರಚಿಸಿದ್ದರೂ, ಇದುವರೆಗೆ ತನ್ನ ಮುಖ್ಯಮಂತ್ರಿಯನ್ನು ಹೊಂದಲಾಗದ ರಾಜ್ಯವಾಗಿಯೇ ಬಿಹಾರ ಉಳಿದು ಬಂದಿದೆ.