ಅತ್ಯಾಚಾರ ಆರೋಪ ಎದುರಿಸುತ್ತಿರುವ ಹರ್ಯಾಣದ ಬಿಜೆಪಿ ರಾಜ್ಯಾಧ್ಯಕ್ಷರ ರಾಜಿನಾಮೆಗೆ ಬಿಜೆಪಿ ಸಚಿವರಿಂದಲೇ ಒತ್ತಾಯ
ಪಕ್ಷದ ತತ್ವಗಳನ್ನು ಎತ್ತಿಹಿಡಿಯಲು ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದ ಸಚಿವ ಅನಿಲ್ ವಿಜ್

ಮೋಹನ್ ಲಾಲ್ ಬಡೋಲಿ / ಅನಿಲ್ ವಿಜ್ (Photo: PTI)
ಹೊಸದಿಲ್ಲಿ: ಅತ್ಯಾಚಾರ ಆರೋಪ ಎದುರಿಸುತ್ತಿರುವ ಹರ್ಯಾಣದ ಬಿಜೆಪಿ ರಾಜ್ಯಾಧ್ಯಕ್ಷ ಮೋಹನ್ ಲಾಲ್ ಬಡೋಲಿ ಅವರ ರಾಜಿನಾಮೆಗೆ ಅವರದೇ ಪಕ್ಷದವರಾಗಿರುವ, ಸಚಿವ ಅನಿಲ್ ವಿಜ್ ಅವರು ಆಗ್ರಹಿಸಿದ್ದಾರೆ ಎಂದು The Indian Express ವರದಿ ಮಾಡಿದೆ.
“ಅವರು ಸಾಮೂಹಿಕ ಅತ್ಯಾಚಾರದ ಆರೋಪಿಯಾಗಿದ್ದಾರೆ. ಅಂತಹ ವ್ಯಕ್ತಿ ಮಹಿಳೆಯರ ಸಭೆಯ ಅಧ್ಯಕ್ಷತೆಯನ್ನು ಹೇಗೆ ವಹಿಸಬಹುದು? ಪಕ್ಷದ ತತ್ವಗಳನ್ನು ಎತ್ತಿಹಿಡಿಯಲು, ಅವರು ತಕ್ಷಣವೇ ರಾಜೀನಾಮೆ ನೀಡಬೇಕು” ಎಂದು ಹರಿಯಾಣದ ಕಾರ್ಮಿಕ, ಇಂಧನ ಮತ್ತು ಸಾರಿಗೆ ಖಾತೆಗಳ ಸಚಿವ ಅನಿಲ್ ವಿಜ್ ಹೇಳಿದ್ದಾರೆ.
“ಅಡ್ವಾಣಿ ಜಿ ಅವರಂತಹ ನಮ್ಮ ಹಿರಿಯ ನಾಯಕರು ಸಹ ಅವರ ವಿರುದ್ಧ ಆರೋಪಗಳು ಬಂದಾಗ ರಾಜೀನಾಮೆ ನೀಡಿದ್ದರು. ಬಡೋಲಿ ಅಡ್ವಾನಿಗಿಂತ ಮೇಲಲ್ಲ” ಎಂದು ಅವರು ಹೇಳಿದ್ದಾರೆ.
ಡಿಸೆಂಬರ್ನಲ್ಲಿ ಹಿಮಾಚಲ ಪ್ರದೇಶದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಡೋಲಿ ಮತ್ತು ಗಾಯಕ ರಾಕಿ ಮಿತ್ತಲ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ, ಇಬ್ಬರೂ ಈ ಆರೋಪಗಳನ್ನು ನಿರಾಕರಿಸಿದ್ದಾರೆ.
ಬಡೋಲಿ ಹರಿಯಾಣ ವಿಧಾನಸಭಾ ಚುನಾವಣೆಗೆ ಮುನ್ನ ಜುಲೈನಲ್ಲಿ ರಾಜ್ಯ ಬಿಜೆಪಿ ಮುಖ್ಯಸ್ಥರಾದರು. 2019 ರಿಂದ ಅಕ್ಟೋಬರ್ 2024 ರವರೆಗೆ ರಾಯ್ ಕ್ಷೇತ್ರದ ಶಾಸಕರಾಗಿದ್ದ ಅವರು, ಜೂನ್ನಲ್ಲಿ ಸೋನಿಪತ್ನಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು.
"ಹಿಮಾಚಲ ಪ್ರದೇಶ ಪೊಲೀಸರ ತನಿಖೆಯಲ್ಲಿ ಅವರು ತಮ್ಮನ್ನು ತಾವು ನಿರಪರಾಧಿ ಎಂದು ಸಾಬೀತುಪಡಿಸುತ್ತಾರೆ ಎಂದು ನಾನು ನಂಬುತ್ತೇನೆ. ಆದರೆ ಅಲ್ಲಿಯವರೆಗೆ, ಪಕ್ಷದ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು, ಅವರು ಈ ಹುದ್ದೆಗೆ ರಾಜೀನಾಮೆ ನೀಡಬೇಕು." ಎಂದು ಅವರು ಹೇಳಿದ್ದಾರೆ.