ಸುದ್ದಿ ವಾಹಿನಿಯ ಸಂದರ್ಶನವೊಂದರಲ್ಲಿ ‘ದಲಿತ’ ಪದ ಬಳಸಿದ ಬಿಜೆಪಿ ಶಾಸಕನ ವಿರುದ್ಧ ಎಫ್ಐಆರ್ ದಾಖಲು
ಬಿಜೆಪಿ ಶಾಸಕ ನಿತೇಶ್ ರಾಣೆ (PTI)
ಮುಂಬೈ: ಸುದ್ದಿ ವಾಹಿನಿಯ ಸಂದರ್ಶನವೊಂದರಲ್ಲಿ ‘ದಲಿತ’ ಪದ ಬಳಸಿದ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ನಿತೇಶ್ ರಾಣೆ ವಿರುದ್ಧ ಸೋಮವಾರ ನವಿ ಮುಂಬೈ ಪೊಲೀಸರು ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಂಡಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಂಕ್ವಲಿ ಕ್ಷೇತ್ರದ ಶಾಸಕರಾಗಿರುವ ನಿತೇಶ್ ರಾಣೆ ವಿರುದ್ಧ ಕಳೆದ ವಾರ ವಕೀಲರೊಬ್ಬರು ದೂರು ದಾಖಲಿಸಿದ್ದರು.
ಪ್ರಾದೇಶಿಕ ಸುದ್ದಿ ವಾಹಿನಿಯೊಂದು ನಡೆಸಿರುವ ನಿತೇಶ್ ರಾಣೆ ಅವರ ಸಂದರ್ಶನದ ವಿಡಿಯೊವನ್ನು ಯೂಟ್ಯೂಬ್ ನಲ್ಲಿ ಗಮನಿಸಿರುವ ದೂರುದಾರರು, ಆಗಸ್ಟ್ 7, 2018ರಲ್ಲಿ ಕೇಂದ್ರ ಸರ್ಕಾರ ನಿಷೇಧಿಸಿರುವ ‘ದಲಿತ’ ಪದವನ್ನು ಅವರು ಬಳಸಿರುವುದಾಗಿ ದೂರು ನೀಡಿದ್ದಾರೆ ಎಂದು ಎಂದು ಪ್ರಾಥಮಿಕ ಮಾಹಿತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಗಳಾದ 153 ಎ (ಧರ್ಮ, ಜನಾಂಗ, ಜನ್ಮ ಸ್ಥಳ, ನಿವಾಸದ ನೆಲೆಯಲ್ಲಿ ಎರಡು ವಿಭಿನ್ನ ಗುಂಪುಗಳ ನಡುವೆ ದ್ವೇಷ ಪ್ರಚೋದನೆ), 153 ಬಿ (ದೇಶದ ಸಮಗ್ರತೆಯ ಬಗ್ಗೆ ಪೂರ್ವಗ್ರಹ ಮೂಡಿಸುವಂತಹ ಆಪಾದನೆಗಳು, ತೀರ್ಮಾನಗಳು) ಹಾಗೂ 295 ಎ (ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಉದ್ರೇಕಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯ)ಗಳ ಅನ್ವಯ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಇದರೊಂದಿಗೆ ಪೊಲೀಸರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯನ್ನೂ ನಿತೇಶ್ ರಾಣೆ ವಿರುದ್ಧ ಹೇರಿದ್ದಾರೆ. ಈ ಪ್ರಕರಣವನ್ನು ನ್ಯಾಯಾಲಯದ ಆದೇಶದ ಮೇರೆಗೆ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದು, ಈ ಸಂಬಂಧ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದೂ ಹೇಳಿದ್ದಾರೆ.