ಬಿಜೆಪಿ ಕಾರ್ಯಕರ್ತರು EVM ಸ್ಟ್ರಾಂಗ್ ರೂಂಗೆ ಪ್ರವೇಶಿಸಲು ಯತ್ನಿಸಿದ್ದಾರೆ: ಮತ ಎಣಿಕೆ ಮಧ್ಯೆ ರೋಹಿತ್ ಪವಾರ್ ಗಂಭೀರ ಆರೋಪ
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ
ರೋಹಿತ್ ಪವಾರ್ (PTI)
ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮತ ಎಣಿಕೆ ಬಿರುಸಿನಿಂದ ನಡೆಯುತ್ತಿದೆ. ಈ ಮಧ್ಯೆ ಮಧ್ಯರಾತ್ರಿ 25 ರಿಂದ 30 ಬಿಜೆಪಿ ಕಾರ್ಯಕರ್ತರು ಕರ್ಜಾತ್-ಜಮಖೇಡ್ನ ಇವಿಎಂಗಳ ಸ್ಟ್ರಾಂಗ್ ರೂಂಗೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ ಎಂದು ಶರದ್ ಪವಾರ್ ನೇತೃತ್ವದ ಎನ್ ಸಿಪಿ ನಾಯಕ ರೋಹಿತ್ ಪವಾರ್ ಆರೋಪಿಸಿದ್ದಾರೆ.
ಎನ್ ಸಿಪಿ ನಾಯಕ(ಶರದ್ ಪವಾರ್ ಬಣ) ರೋಹಿತ್ ಪವಾರ್ ಕರ್ಜಾತ್ ಜಮಖೇಡ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ರಾಮ್ ಶಿಂಧೆ ವಿರುದ್ಧ ಕಣದಲ್ಲಿದ್ದಾರೆ.
ಕರ್ಜತ್ ಜಮಖೇಡ್ನಲ್ಲಿ ಮಧ್ಯರಾತ್ರಿ ಇವಿಎಂ ಯಂತ್ರಗಳನ್ನು ಸಂಗ್ರಹಿಸಿಟ್ಟಿದ್ದ ಸ್ಟ್ರಾಂಗ್ ರೂಂಗೆ ಸುಮಾರು 25 ರಿಂದ 30 ಬಿಜೆಪಿ ಕಾರ್ಯಕರ್ತರು ಬಲವಂತವಾಗಿ ಪ್ರವೇಶಿಸಲು ಯತ್ನಿಸಿದ್ದಾರೆ. ಆದರೆ ನಮ್ಮ ಪಕ್ಷದ ಕಾರ್ಯಕರ್ತರು, ಸಿ ಆರ್ ಪಿಎಫ್ ಸಿಬ್ಬಂದಿಗಳ ಜೊತೆ ಸೇರಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ ಎಂದು ರೋಹಿತ್ ಪವಾರ್ ಎಕ್ಸ್ ನಲ್ಲಿನ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ನಾವು ಪೊಲೀಸರನ್ನು ಸಂಪರ್ಕಿಸಿ ಈ ಬಗ್ಗೆ ದೂರು ನೀಡಿದ್ದೇವೆ ಆದರೆ, ಬಿಜೆಪಿಯ ಪ್ರಭಾವದಿಂದ ಅವರು ಸಹಕಾರಿಸುವ ಬದಲು ನಮಗೆ ಕಿರುಕುಳ ನೀಡಿದ್ದಾರೆ ಎಂದು ರೋಹಿತ್ ಪವಾರ್ ಆರೋಪಿಸಿದ್ದಾರೆ.