ರೈತರ ಪ್ರತಿಭಟನೆ ವೇಳೆ 700 ಬಾಲಕಿಯರು ನಾಪತ್ತೆ ಎಂದು ಹೇಳಿಕೆ ನೀಡಿ ಬಳಿಕ ಗಾಸಿಪ್ ಎಂದ ಬಿಜೆಪಿ ಸಂಸದ!
ರಾಮ್ ಚಂದರ್ ಜಾಂಗ್ರಾ PC: facebook.com
ಚಂಡೀಗಢ: ದೆಹಲಿ ಗಡಿಯಲ್ಲಿ 2021ರಲ್ಲಿ ರೈತರು ಹಮ್ಮಿಕೊಂಡ ಪ್ರತಿಭಟನೆ ಬಳಿಕ 700 ಬಾಲಕಿಯರು ನಾಪತ್ತೆಯಾಗಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ಬಿಜೆಪಿ ರಾಜ್ಯಸಭಾ ಸದಸ್ಯ ರಾಮ್ ಚಂದರ್ ಜಾಂಗ್ರಾ ಹೊಸ ವಿವಾದ ಹುಟ್ಟುಹಾಕಿದ್ದಾರೆ. ಈ ಪ್ರತಿಪಾದನೆ ಮಾಡಿದ ಮರುದಿನ ಅಂದರೆ ಶುಕ್ರವಾರ ಸ್ಪಷ್ಟನೆ ನೀಡಿರುವ ರಾಮ್ ಚಂದರ್ ಜಾಂಗ್ರಾ "ಅಂಥ ದೂರುಗಳು ಬಂದಿಲ್ಲ; ಇದೆಲ್ಲ ಜನ ಹರಡಿದ ವದಂತಿ" ಎಂದು ಹೇಳಿದ್ದಾರೆ.
ರೋಹ್ಟಕ್ ಬಳಿಕ ಮೆಹಮ್ ನಲ್ಲಿ ಗುರುವಾರ ಸಕ್ಕರೆ ಗಿರಣಿ ಉದ್ಘಾಟನಾ ಸಮಾರಂಭದಲ್ಲಿ 74 ವರ್ಷದ ಸಂಸದ ಈ ಹೇಳಿಕೆ ನೀಡಿದ್ದರು. ರೈತರ ಪ್ರತಿಭಟನೆ ವೇಳೆ ಪಂಜಾಬ್ ನ ಮಾದಕ ವ್ಯಸನಿಗಳು ಹರ್ಯಾಣದಲ್ಲಿ ತಮ್ಮ ಜಾಲವನ್ನು ಹರಡಿದ್ದು, ಸಿಂಘು ಗಡಿ ಮತ್ತು ಬಹದ್ದೂರ್ ಗಢ ಸುತ್ತಮುತ್ತಲ ಗ್ರಾಮಗಳ 700 ಹೆಣ್ಣುಮಕ್ಕಳು ಕಣ್ಮರೆಯಾಗಿದ್ದಾರೆ ಎಂದು ಆಪಾದಿಸಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಹೇಳಿಕೆಯ ವಿಡಿಯೊದಲ್ಲಿ, "ರೈತರು 2021ರಲ್ಲಿ ನಡೆಸಿದ ಪ್ರತಿಭಟನೆ ವೇಳೆ ಪಂಜಾಬ್ ನ ಮಾದಕ ವ್ಯಸನಿಗಳು ಟಿಕ್ರಿ ಮತ್ತು ಸಿಂಘು ಗಡಿಯಲ್ಲಿ ನೆಲೆನಿಂತು ಹರ್ಯಾಣದಲ್ಲಿ ತಮ್ಮ ಜಾಲ ವಿಸ್ತರಿಸಿದರು. ಕೆಲವರು ಮಾದಕವಸ್ತುಗಳ ಚುಚ್ಚುಮದ್ದು ಪಡೆದರೆ ಮತ್ತೆ ಕೆಲವರು ಭುಕಿ (ಕೊಡೇನ್), ಅಫೀಮ್, ಕೊಕೇನ್ ಅಥವಾ ಸ್ಮ್ಯಾಕ್ ಸೇವಿಸಿದ್ದಾರೆ. ಸಿಂಘು ಮತ್ತು ಸುತ್ತಮುತ್ತಲ ಗ್ರಾಮಗಳ 700 ಹೆಣ್ಣುಮಕ್ಕಳು ಕಾಣೆಯಾಗಿದ್ದಾರೆ. ಅವರು ರೈತರೇ ಅಥವಾ ಕಸಾಯಿಗಳೇ? ಕೆಲ ಮಂದಿ ಹರ್ಯಾಣದ ಶಾಂತಿ ಮತ್ತು ಬ್ರಾತೃತ್ವವನ್ನು ಕೆಡಿಸಲು ಬಯಸಿದ್ದಾರೆ" ಎಂದು ಹೇಳಿದ್ದರು.
ಇದು ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಬಿಜೆಪಿ ವಕ್ತಾರ ಸಂಜಯಶರ್ಮಾ ಹೇಳಿಕೆ ನೀಡಿ, ಇದು ಅವರ ವೈಯಕ್ತಿಕ ಹೇಳಿಕೆ. ಪಕ್ಷಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಅಂತರ ಕಾಯ್ದುಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆಯೇ ಎಂದು ಇಂಡಿಯನ್ ಎಕ್ಸ್ಪ್ರೆಸ್ ಸಂಸದರನ್ನು ಕೇಳಿದಾಗ, "ಯಾರೂ ಈ ಬಗ್ಗೆ ದೂರು ನೀಡಿಲ್ಲ. ಜನರು ಹೀಗೆ ಹೇಳುತ್ತಿದ್ದಾರೆ. ಇವೆಲ್ಲ ಗಾಸಿಪ್. ಬಾಲಕಿಯರ ಜತೆ ಯಾವ ರೈತರೂ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂದು ನಾನು ಹೇಳುತ್ತಿಲ್ಲ. ಪ್ರತಿಭಟನೆ ನಂತರದ ಪರಿಣಾಮಗಳ ಬಗ್ಗೆ ಮಾತ್ರ ಹೇಳುತ್ತಿದ್ದೇನೆ" ಎಂದು ಸಬೂಬು ನೀಡಿದರು.
‘हरियाणा में नशा किसानों की देन', Ramchandra Jangra के विवादित बोल, कहा- 700 लड़कियां हो चुकी गायब
— Punjab Kesari Haryana (@HaryanaKesari) December 13, 2024
#HaryanaNews #Rohtak #BJPRajyaSabhaMP #FarmersProtest @rcjangrabjp @BJP4Haryana pic.twitter.com/Pi8AyoRczV