ನಾನು ಜೈಲಿನಲ್ಲಿದ್ದಾಗ ಬಿಜೆಪಿ ನನಗೆ ಮುಖ್ಯಮಂತ್ರಿ ಹುದ್ದೆಯ ಆಮಿಷವೊಡ್ಡಿತ್ತು: ಆಪ್ ನಾಯಕ ಮನೀಶ್ ಸಿಸೋಡಿಯ ಆರೋಪ

ಮನೀಶ್ ಸಿಸೋಡಿಯ (Photo: PTI)
ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನನ್ನು ತಿಹಾರ್ ಜೈಲಿನಲ್ಲಿಟ್ಟಿದ್ದಾಗ ನಾನೇನಾದರೂ ಆಪ್ ತೊರೆದರೆ ನನ್ನನ್ನು ಮುಖ್ಯಮಂತ್ರಿ ಮಾಡುವುದಾಗಿ ಬಿಜೆಪಿಯು ನನಗೆ ಆಮಿಷವೊಡ್ಡಿತ್ತು ಎಂದು ಆಪ್ ನಾಯಕ ಹಾಗೂ ಜಾಂಗ್ಪುರ್ ವಿಧಾನಸಭಾ ಕ್ಷೇತ್ರದ ಆಪ್ ಅಭ್ಯರ್ಥಿ ಮನೀಶ್ ಸಿಸೋಡಿಯ ಗಂಭೀರ ಆರೋಪ ಮಾಡಿದ್ದಾರೆ.
“ಬಿಜೆಪಿ ಸೇರ್ಪಡೆಯಾಗಿ. ನಾವು ಆಪ್ ಅನ್ನು ಒಡೆಯುತ್ತೇವೆ ಹಾಗೂ ನಿಮ್ಮನ್ನು ನಾವು ಮುಖ್ಯಮಂತ್ರಿಯನ್ನಾಗಿಸುತ್ತೇವೆ” ಎಂದು ಬಿಜೆಪಿ ನನಗೆ ಆಹ್ವಾನ ನೀಡಿತ್ತು ಎಂದು ಮನೀಶ್ ಸಿಸೋಡಿಯ ಹೇಳಿದ್ದಾರೆ.
India Today TVಯೊಂದಿಗೆ ವಿಶೇಷ ಮಾತುಕತೆ ನಡೆಸಿರುವ ದಿಲ್ಲಿಯ ಮಾಜಿ ಉಪ ಮುಖ್ಯಮಂತ್ರಿಯೂ ಆದ ಮನೀಶ್ ಸಿಸೋಡಿಯ, ಒಂದು ವೇಳೆ ನಾನೇನಾದರೂ ಆ ಆಹ್ವಾನ ನಿರಾಕರಿಸಿದರೆ, ದೀರ್ಘಕಾಲ ನಿಮ್ಮನ್ನು ಜೈಲಿನಲ್ಲಿಡಲಾಗುವುದು ಎಂದು ನನಗೆ ಬಿಜೆಪಿ ಬೆದರಿಕೆ ಒಡ್ಡಿತ್ತು” ಎಂದೂ ಆರೋಪಿಸಿದ್ದಾರೆ.
“ಬಿಜೆಪಿ ನನಗೆ ಗಡುವು ನೀಡಿತ್ತು. ಅರವಿಂದ್ ಕೇಜ್ರಿವಾಲ್ ರನ್ನು ತೊರೆಯಿರಿ ಅಥವಾ ಜೈಲಿನಲ್ಲಿ ಕೊಳೆಯಿರಿ. ನಾನು ಒದ್ದಾಡುತ್ತಿದ್ದೇನೆ ಎಂಬುದು ಅವರಿಗೆ ಅದಾಗಲೇ ತಿಳಿದಿತ್ತು. ಅವರಿಗೆ ನನ್ನ ಪತ್ನಿ ಹಾಸಿಗೆ ಹಿಡಿದಿರುವುದು ತಿಳಿದಿತ್ತು. ಅವರಿಗೆ ನನ್ನ ಪುತ್ರ ವ್ಯಾಸಂಗ ಮಾಡುತ್ತಿರುವುದು ತಿಳಿದಿತ್ತು. ಇದು ಅವರ ಯಾಂತ್ರಿಕತೆಯಾಗಿದೆ. ಅವರು ಇತರ ಪಕ್ಷಗಳಿಂದ ನಾಯಕರನ್ನು ಖರೀದಿಸಿ, ಅವರನ್ನು ಬಿಜೆಪಿಯ ವಾಶಿಂಗ್ ಮೆಷಿನ್ ನೊಳಕ್ಕೆ ಹೋಗುವಂತೆ ಮಾಡುತ್ತಾರೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.
ಬಿಜೆಪಿಯ ಕಾರ್ಯಸೂಚಿಯೊಂದಿಗೆ ಮೈತ್ರಿ ಮಾಡಿಕೊಳ್ಳದ ವಿರೋಧ ಪಕ್ಷಗಳನ್ನು ಬಿಜೆಪಿ ವ್ಯವಸ್ಥಿತವಾಗಿ ಗುರಿಯಾಗಿಸಿಕೊಳ್ಳುತ್ತದೆ ಎಂದು ಆರೋಪಿಸಿರುವ ಮನೀಶ್ ಸಿಸೋಡಿಯ, “ವಿರೋಧ ಪಕ್ಷಗಳನ್ನು ಒಡೆಯಲು ಬಿಜೆಪಿ ಕಾರ್ಖಾನೆಯೊಂದನ್ನು ಸ್ಥಾಪಿಸಿದೆ. ಯಾರನ್ನು ಮುರಿಯಲು ಸಾಧ್ಯವಿಲ್ಲವೊ ಅಂಥವರನ್ನು ಜೈಲಿಗೆ ಕಳಿಸಲಾಗುತ್ತದೆ” ಎಂದೂ ಆಪಾದಿಸಿದ್ದಾರೆ.