ಲೋಕಸಭೆ ಸ್ಪೀಕರ್ ಹುದ್ದೆ ಉಳಿಸಿಕೊಂಡು ಮಿತ್ರಪಕ್ಷಕ್ಕೆ ಉಪಸ್ಪೀಕರ್ ಹುದ್ದೆ ನೀಡಲು ಬಿಜೆಪಿ ಚಿಂತನೆ: ವರದಿ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಪ್ರಸಕ್ತ ಲೋಕಸಭೆಯ ಸ್ಪೀಕರ್ ಹುದ್ದೆಯನ್ನು ತಾನೇ ಉಳಿಸಿಕೊಂಡು ಎನ್ಡಿಎ ಪಾಲುದಾರ ಪಕ್ಷಗಳಾದ ಜೆಡಿಯು ಅಥವಾ ಟಿಡಿಪಿಗೆ ಉಪಸ್ಪೀಕರ್ ಹುದ್ದೆ ನೀಡುವ ಬಗ್ಗೆ ಬಿಜೆಪಿ ಚಿಂತನೆ ನಡೆಸಿದೆ ಎಂದು News18 ವರದಿ ಮಾಡಿದೆ.
ಈ ಮೊದಲು ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಪಾರ್ಟಿ (TDP) ಸ್ಪೀಕರ್ ಹುದ್ದೆಯ ಮೇಲೆ ಕಣ್ಣಿಟ್ಟಿದೆ ಮತ್ತು ಈ ಕಾರಣದಿಂದ ಸರ್ಕಾರವನ್ನು ಬೆಂಬಲಿಸಿದೆ ಎಂದು ಹೇಳಲಾಗಿತ್ತು. ಆದರೆ ಈ ಪ್ರಮುಖ ಹುದ್ದೆಯನ್ನು ತನ್ನಲ್ಲೇ ಉಳಿಸಿಕೊಂಡು ಮಿತ್ರಪಕ್ಷಗಳಿಗೆ ಉಪಸ್ಪೀಕರ್ ಹುದ್ದೆ ನೀಡಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದೆ.
ಲೋಕಸಭೆಯ 8 ದಿನಗಳ ವಿಶೇಷ ಅಧಿವೇಶನ ಈ ತಿಂಗಳ 24ರಂದು ಆರಂಭವಾಗಲಿದ್ದು, ಸ್ಪೀಕರ್ ಹುದ್ದೆಗೆ ಜೂನ್ 26ರಂದು ಚುನಾವಣೆ ನಡೆಯಲಿದೆ. ಬಿಜೆಪಿಯ ಕೋಟಾ ಸಂಸದ ಓಂ ಬಿರ್ಲಾ 17ನೇ ಲೋಕಸಭೆಯಲ್ಲಿ ಸ್ಪೀಕರ್ ಸ್ಥಾನ ಅಲಂಕರಿಸಿದ್ದರು.
ಇದೀಗ ಎನ್ಡಿಎ ಮಿತ್ರಪಕ್ಷಗಳ ಜತೆ ಈ ಸಂಬಂಧ ಚರ್ಚಿಸುವ ಹೊಣೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ವಹಿಸಲಾಗಿದೆ ಎಂದು ತಿಳಿದು ಬಂದಿದೆ.
ಸ್ಪೀಕರ್ ಹುದ್ದೆ ಲೋಕಸಭೆಯಲ್ಲಿ ಮಹತ್ವದ ಸ್ಥಾನವಾಗಿದ್ದು, ಹಲವು ವಿಶೇಷ ಹಕ್ಕುಗಳು ಇವರಿಗೆ ಇರುತ್ತವೆ. ಸದಸ್ಯರನ್ನು ಅನರ್ಹಗೊಳಿಸುವುದು ಅಥವಾ ಅಮಾನತು ಮಾಡುವುದು, ಪ್ರಶ್ನೆಗಳನ್ನು ಕೇಳುವ ಬಗ್ಗೆ ನಿರ್ಧರಿಸುವುದು, ಸಂಸದರ ಅಭಿಪ್ರಾಯಗಳಲ್ಲಿ ಅಸಂವಿಧಾನಿಕ ಪದಗಳನ್ನು ಕಡತದಿಂದ ಕಿತ್ತುಹಾಕುವುದು ಮತ್ತು ಧ್ವನಿಮತದಿಂದ ಮಸೂದೆಗಳನ್ನು ಆಂಗೀಕರಿಸುವ ಅಧಿಕಾರವೂ ಇದರಲ್ಲಿ ಸೇರಿದೆ.
ಲೋಕಸಭೆ ಸ್ಪೀಕರ್ ಹುದ್ದೆಗೆ ಬಿಜೆಪಿ ಆಯ್ಕೆ ಮಾಡುವ ಅಭ್ಯರ್ಥಿಯನ್ನು ಮಿತ್ರಪಕ್ಷಗಳಾದ ಟಿಡಿಪಿ ಮತ್ತು ಜೆಡಿಯು ಬೆಂಬಲಿಸಲಿವೆ ಎಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ.ತ್ಯಾಗಿ ಹೇಳಿಕೆ ನೀಡಿದ್ದಾರೆ.