ಜು.18ರ ಎನ್ಡಿಎ ಸಭೆಯಲ್ಲಿ ಪಾಲ್ಗೊಳ್ಳುವಂತೆ ಚಿರಾಗ್ ಪಾಸ್ವಾನ್ ಗೆ ಬಿಜೆಪಿ ಅಧ್ಯಕ್ಷ ನಡ್ಡಾ ಪತ್ರ
JP Nadda | Photo : PTI
ಹೊಸದಿಲ್ಲಿ: ಮೋದಿ ಸರಕಾರದ ವಿರುದ್ಧ ಒಂದಾಗಲು ಪ್ರತಿಪಕ್ಷಗಳ ತೀವ್ರ ಪ್ರಯತ್ನಗಳ ನಡುವೆಯೇ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವ ಬಿಜೆಪಿ ಜು.18ರಂದು ಹಮ್ಮಿಕೊಂಡಿರುವ ಎನ್ಡಿಎ ಸಭೆಯಲ್ಲಿ ಲೋಕ ಜನಶಕ್ತಿ ಪಾರ್ಟಿ (ರಾಮವಿಲಾಸ ಪಾಸ್ವಾನ್)ಯ ನಾಯಕ ಚಿರಾಗ್ ಪಾಸ್ವಾನ್ ಅವರು ಪಾಲ್ಗೊಳ್ಳುವ ಸಾಧ್ಯತೆಯಿದೆ.
ಶುಕ್ರವಾರ ರಾತ್ರಿ ಪಾಸ್ವಾನ್ರನ್ನು ಭೇಟಿಯಾದ ಕೇಂದ್ರ ಸಚಿವ ನಿತ್ಯಾನಂದ ರಾಯ್ ಅವರು, ಎನ್ಡಿಎ ಸಭೆಗೆ ಯುವನಾಯಕನನ್ನು ಆಹ್ವಾನಿಸಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬರೆದಿರುವ ಪತ್ರವನ್ನು ಹಸ್ತಾಂತರಿಸಿದರು. ಇದು ಈ ವಾರದಲ್ಲಿ ರಾಯ್ ಮತ್ತು ಪಾಸ್ವಾನ್ ನಡುವಿನ ಎರಡನೇ ಭೇಟಿಯಾಗಿದೆ.
ನಡ್ಡಾ ಅವರು ಪತ್ರದಲ್ಲಿ ಚಿರಾಗ್ ನೇತೃತ್ವದ ಲೋಕ ಜನಶಕ್ತಿ ಪಕ್ಷವನ್ನು ಎನ್ಡಿಎದ ಪ್ರಮುಖ ಘಟಕ ಮತ್ತು ಬಡವರ ಅಭಿವೃದ್ಧಿ ಹಾಗೂ ಕಲ್ಯಾಣಕ್ಕಾಗಿ ಮೋದಿ ನೇತೃತ್ವದ ಸರಕಾರದ ಪ್ರಯತ್ನಗಳಲ್ಲಿ ಪ್ರಮುಖ ಪಾಲುದಾರ ಎಂದು ಬಣ್ಣಿಸಿದ್ದಾರೆ.
ಬಿಜೆಪಿಯು ದಿವಂಗತ ದಲಿತ ನಾಯಕ ರಾಮವಿಲಾಸ ಪಾಸ್ವಾನ್ ಅವರ ಪುತ್ರ ಚಿರಾಗ್ ಸಂಪರ್ಕದಲ್ಲಿರುವುದು ಅದು ಈ ಯುವನಾಯಕನ್ನು ಮರಳಿ ಎನ್ಡಿಎ ತೆಕ್ಕೆಗೆ ತರಲು ಒತ್ತು ನೀಡುತ್ತಿದೆ ಎನ್ನುವುದನ್ನು ಬೆಟ್ಟು ಮಾಡಿದೆ. 2020ರ ಬಿಹಾರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಆಗ ಬಿಜೆಪಿಯ ಪ್ರಮುಖ ಮಿತ್ರನಾಗಿದ್ದ ಮುಖ್ಯಮಂತ್ರಿ ನಿತೀಶ ಕುಮಾರ ವಿರುದ್ಧ ಪ್ರಚಾರ ಮಾಡಲು ಚಿರಾಗ್ ಎನ್ಡಿಎ ಮೈತ್ರಿಕೂಟವನ್ನು ತೊರೆದಿದ್ದರು.
ಈಗ ಕೇಂದ್ರ ಸಚಿವರಾಗಿರುವ ಚಿಕ್ಕಪ್ಪ ಪಶುಪತಿ ಕುಮಾರ್ ಪಾರಸ್ ನೇತೃತ್ವದಲ್ಲಿ ಲೋಕ ಜನಶಕ್ತಿ ಪಾರ್ಟಿಯ ವಿಭಜನೆಯು ಚಿರಾಗ್ರನ್ನು ಶಕ್ತಿಗುಂದಿಸಿದೆಯಾದರೂ ಪಕ್ಷದ ನಿಷ್ಠಾವಂತ ಮತ ಬ್ಯಾಂಕ್ನ್ನು ತನ್ನೊಂದಿಗೆ ಉಳಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಇದು ಬಿಹಾರದಲ್ಲಿಯ ಆರ್ಜೆಡಿ,ಜೆಡಿಯು,ಕಾಂಗ್ರೆಸ್ ಮತ್ತು ಎಡರಂಗಗಳ ಪ್ರಬಲ ಮೈತ್ರಿಕೂಟದ ವಿರುದ್ಧ ಕಣದಲ್ಲಿರುವ ಬಿಜೆಪಿಗೆ ಅವರ ಪ್ರಾಮುಖ್ಯತೆಯ ಅರಿವನ್ನು ಮೂಡಿಸಿದೆ. ಅಲ್ಲದೆ ಚಿರಾಗ್ ಪ್ರಮುಖ ವಿಷಯಗಳಲ್ಲಿ ಬಿಜೆಪಿಗೆ ಸ್ಥಿರವಾದ ಬೆಂಬಲವನ್ನು ನೀಡುತ್ತಲೇ ಬಂದಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನೆ,ಅಜಿತ ಪವಾರ್ ನೇತೃತ್ವದ ಎನ್ಸಿಪಿ ಬಣ,ಬಿಹಾರ ಮತ್ತು ಉತ್ತರ ಪ್ರದೇಶದ ಹಲವಾರು ಸಣ್ಣಪಕ್ಷಗಳು ಹಾಗೂ ಈಶಾನ್ಯ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಸೇರಿದಂತೆ ಬಿಜೆಪಿಯ ಹಲವಾರು ನೂತನ ಮಿತ್ರಪಕ್ಷಗಳು ಎನ್ಡಿಎ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.