ಆಪ್ ಕಚೇರಿ ಮುಂದೆ ಬಿಜೆಪಿ ಪ್ರತಿಭಟನೆ | ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಎಲ್ಜಿ ಶಿಫಾರಸಿಗೆ ಬೆಂಬಲ
Photo: PTI
ಹೊಸದಿಲ್ಲಿ: ದಿಲ್ಲಿ ಬಿಜೆಪಿ ಘಟಕದ ಹಲವು ನಾಯಕರು ಬುಧವಾರ ರಾಜಧಾನಿಯಲ್ಲಿರುವ ಆಪ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ನಿಷೇಧಿತ ಸಿಖ್ ತೀವ್ರಗಾಮಿ ಸಂಘಟನೆ ಸಿಖ್ಸ್ ಫಾರ್ ಜಸ್ಟಿಸ್ನಿಂದ ದೇಣಿಗೆ ಸ್ವೀಕರಿಸಿದ್ದಾರೆನ್ನಲಾದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಮಾಡಿರುವ ಶಿಫಾರಸನ್ನು ಪ್ರತಿಭಟನಕಾರರು ಬೆಂಬಲಿಸಿದ್ದಾರೆ.
“ನಿಷೇಧಿತ ಉಗ್ರ ಸಂಘಟನೆಯಿಂದ ಆಪ್ ದೇಣಿಗೆ ಪಡೆದಿದೆ ಎಂಬುದು ಅತ್ಯಂತ ನಾಚಿಕೆಗೇಡು. ಈ ಕುರಿತಂತೆ ದಿಲ್ಲಿ ನಿವಾಸಿಗಳಿಗೆ ಮಾಹಿತಿ ನೀಡಲು ಪಕ್ಷ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಲಿದ್ದಾರೆ”,ಎಂದು ದಿಲ್ಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ದೇವಾ ಹೇಳಿದ್ದಾರೆ.
ಆಪ್ ಕಚೇರಿಯೆದುರು ಅಳವಡಿಸಲಾಗಿದ್ದ ಬ್ಯಾರಿಕೇಡ್ಗಳನ್ನು ದಾಟಿ ಬಿಜೆಪಿ ಕಾರ್ಯಕರ್ತರು ಮುಂದೆ ಹೋಗಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆದು ತಮ್ಮ ವಶಕ್ಕೆ ಪಡೆದುಕೊಂಡರು.
ಕೇಜ್ರಿವಾಲ್ ಕುರಿತು ಮಾಡಲಾಗಿರುವ ಆರೋಪಗಳು “ರಾಜಕೀಯವಾಗಿ ಪ್ರೇರಿತವಾಗಿವೆ,” ಎಂದು ಹಿರಿಯ ಆಪ್ ನಾಯಕ ಸೌರಭ್ ಭಾರದ್ವಾಜ್ ಹೇಳಿದ್ದಾರೆ. “ಈ ರೀತಿ ಕ್ಷುಲ್ಲಕ ಆರೋಪಗಳನ್ನು ಹಿಂದಿನಿಂದಲೂ ಅವರು ಮಾಡುತ್ತಿದ್ದಾರೆ. ಪಂಜಾಬ್ ಚುನಾವಣೆಗೆ ಮುಂಚೆ ಎರಡು ವರ್ಷಗಳ ಹಿಂದೆಯೂ ಇದೇ ರೀತಿ ಮಾಡಿದ್ದರು. 2022ರಲ್ಲಿ ಗೃಹ ಸಚಿವ ಅಮಿತ್ ಶಾ ತನಿಖೆ ನಡೆಸುವುದಾಗಿ ಹೇಳಿದ್ದರು. ಈ ಎರಡು ವರ್ಷಗಳ ತನಿಖೆಯಿಂದ ಏನಾಯಿತು?”, ಎಂದು ಅವರು ಪ್ರಶ್ನಿಸಿದ್ದಾರೆ.