ಕಮಲ್ ನಾಥ್ ಮತ್ತು ಪುತ್ರನಿಗೆ ಸ್ವಾಗತ ಎಂದ ಬಿಜೆಪಿ; ವದಂತಿ ನಿರಾಕರಿಸಿದ ಕಾಂಗ್ರೆಸ್
ಭೋಪಾಲ್: ಕಾಂಗ್ರೆಸ್ನ ಹಿರಿಯ ಮುಖಂಡ ಕಮಲ್ ನಾಥ್ ಹಾಗೂ ಚಿಂದ್ವಾರಾ ಸಂಸದ ನಕುಲ್ ನಾಥ್ ಅವರು ಕೇಸರಿ ಪಾಳಯಕ್ಕೆ ಸೇರಲು ಸದಾ ಸ್ವಾಗತ ಎಂದು ಮಧ್ಯಪ್ರದೇಶದ ಆಡಳಿತಾರೂಢ ಬಿಜೆಪಿ ಶುಕ್ರವಾರ ಹೇಳಿದೆ.
ತಂದೆ- ಮಗ ಪಕ್ಷ ಬದಲಾಯಿಸುವ ಸಿದ್ಧತೆಯಲ್ಲಿದ್ದಾರೆ ಎಂಬ ದಟ್ಟ ವದಂತಿಗಳ ನಡುವೆಯೇ ಬಿಜೆಪಿ ಈ ಆಹ್ವಾನ ಮುಂದಿಟ್ಟಿರುವುದು ಕುತೂಹಲ ಕೆರಳಿಸಿದೆ. ಆದರೆ ಈ ಪಕ್ಷಾಂತರ ಸಾಧ್ಯತೆಯನ್ನು ಕಾಂಗ್ರೆಸ್ ನಿರಾಕರಿಸಿದೆ. ಕಮಲ್ನಾಥ್ ಅವರು ಇಂದಿರಾಗಾಂಧಿ ಯುಗದ ಕಟ್ಟಕಡೆಯ ಕಾಂಗ್ರೆಸ್ ಮುಖಂಡರಾಗಿದ್ದಾರೆ.
ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಅಧ್ಯಕ್ಷ ವಿ.ಡಿ.ಶರ್ಮಾ, "ಅಯೋಧ್ಯೆಯಲ್ಲಿ ಜನವರಿ 22ರಂದು ನಡೆದ ರಾಮನ ಮೂರ್ತಿ ಪ್ರತಿಷ್ಠಾಪನೆ ಸಮಾರಂಭವನ್ನು ಕಾಂಗ್ರೆಸ್ ಪಕ್ಷ ಬಹಿಷ್ಕರಿಸಿದ ಪಕ್ಷದ ಬಳಿಕ ಹಲವು ಮಂದಿ ನಾಯಕರಿಗೆ ತೀವ್ರ ನೋವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಬಾಗಿಲನ್ನು ತೆರೆದಿದೆ" ಎಂದು ಸ್ಪಷ್ಟಪಡಿಸಿದ್ದರು.
"ತಾತ್ವಿಕವಾಗಿ ನಮ್ಮ ಸಿದ್ಧಾಂತ ಹಾಗೂ ನಾಯಕತ್ವದ ಮೇಲೆ ನಂಬಿಕೆ ಇಟ್ಟು ಬರುವ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಮುಂದುವರಿಯಲು ಇಚ್ಛೆ ಇರುವ ಎಲ್ಲರಿಗೂ ಪಕ್ಷದ ಬಾಗಿಲು ತೆರೆದಿದೆ" ಎಂದು ಅವರು ಹೇಳಿದ್ದಾರೆ.
ಆಚಾರ್ಯ ಪ್ರಮೋದ್ ಕೃಷ್ಣಮ್ ಅವರು ಬಿಜೆಪಿ ಸೇರುವ ಸಾಧ್ಯತೆ ಬಗ್ಗೆ ಕಮಲ್ನಾಥ್ ಪ್ರತಿಕ್ರಿಯೆಯ ಬಳಿಕ ಹಿರಿಯ ಕಾಂಗ್ರೆಸ್ ಮುಖಂಡ ಕೂಡಾ ಪಕ್ಷ ತೊರೆಯುತ್ತಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆ.