ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತವನ್ನು ತಪ್ಪಿಸಲು ಬಿರೇನ್ ಸಿಂಗ್ ಬದಲಿಗೆ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಬಿಜೆಪಿ ಕಸರತ್ತು

ಸಂಬಿತ್ ಪಾತ್ರಾ (PTI)
ಇಂಫಾಲ: ಜನಾಂಗೀಯ ಸಂಘರ್ಷ ಪೀಡಿತ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತವನ್ನು ತಪ್ಪಿಸಲು, ಬಿರೇನ್ ಸಿಂಗ್ ಬದಲಿಗೆ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕಸರತ್ತನ್ನು ಬಿಜೆಪಿ ಸೋಮವಾರ ಕೂಡಾ ಮುಂದುವರಿಸಿತು.
ರವಿವಾರ ಸಂಜೆ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾರಿಗೆ ಬಿರೇನ್ ಸಿಂಗ್ ತಮ್ಮ ರಾಜೀನಾಮೆ ಸಲ್ಲಿಸಿದಾಗಿನಿಂದ ಮಣಿಪುರ ಬಿಜೆಪಿ ಉಸ್ತುವಾರಿ ಸಂಬಿತ್ ಪಾತ್ರಾ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳು ಸೇರಿದಂತೆ ಹಲವಾರು ಶಾಸಕರೊಂದಿಗೆ ಇಂಫಾಲದಲ್ಲಿ ಪ್ರತ್ಯೇಕ ಸಭೆಗಳನ್ನು ನಡೆಸಿದರು. ಆದರೆ, ಪಕ್ಷದ ಮೂಲಗಳ ಪ್ರಕಾರ, ಮುಖ್ಯಮಂತ್ರಿ ಹುದ್ದೆಗೆ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸೋಮವಾರ ಸಂಜೆಯವರೆಗೂ ಪಕ್ಷಕ್ಕೆ ಇನ್ನೂ ಸಾಧ್ಯವಾಗಿಲ್ಲ ಎಂದು ಹೇಳಲಾಗಿದ್ದು, ಅದಕ್ಕಾಗಿ ಸಂಬಿತ್ ಪಾತ್ರಾ ತಮ್ಮ ಪ್ರಯತ್ನಗಳನ್ನು ಮುಂದುವರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಂಬಿತ್ ಪಾತ್ರಾರನ್ನು ಭೇಟಿಯಾಗಿದ್ದ ಪ್ರಮುಖ ಶಾಸಕರ ಪೈಕಿ ಬಿರೇನ್ ಸಿಂಗ್ ರ 2017ರಿಂದ 2022ರ ಪ್ರಥಮ ಅವಧಿಯಲ್ಲಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದ ಹಿರಿಯ ಶಾಸಕ ಯುಮನಮ್ ಖೇಮ್ ಚಂದ್ ಕೂಡಾ ಸೇರಿದ್ದಾರೆ. ಖೇಮ್ ಚಂದ್ ರನ್ನು ಬಿರೇನ್ ಸಿಂಗ್ ರ ಟೀಕಾಕಾರ ಎಂದು ಹೇಳಲಾಗಿದ್ದರೂ, ಅವರಿಗೆ ಆರೆಸ್ಸೆಸ್ ನ ಬೆಂಬಲವಿದೆ.
ಹಾಲಿ ಸ್ಪೀಕರ್ ಥ. ಸತ್ಯಬ್ರತ ಸಿಂಗ್ ಕೂಡಾ ಬಿರೇನ್ ಸಿಂಗ್ ರ ಟೀಕಾಕಾರರಾಗಿದ್ದು, ಅವರೂ ಕೂಡಾ ಇಂಫಾಲ ಹೋಟೆಲ್ ನಲ್ಲಿ ಸಂಬಿತ್ ಪಾತ್ರಾರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಬಿರೇನ್ ಸಿಂಗ್ ಸಂಪುಟದಲ್ಲಿ ಈಗಲೂ ಸಚಿವರಾಗಿರುವ ಥ. ಬಿಸ್ವಜಿತ್ ಸಿಂಗ್ ಕೂಡಾ ಪಾತ್ರಾರನ್ನು ಭೇಟಿಯಾಗಿದ್ದರು. ಬಿಸ್ವಜಿತ್ ಸಿಂಗ್ ಕೂಡಾ ಮುಖ್ಯಮಂತ್ರಿ ಹುದ್ದೆಯ ಮತ್ತೊಬ್ಬ ಆಕಾಂಕ್ಷಿ ಎಂದು ಹೇಳಲಾಗಿದೆ.
2022ರಲ್ಲಿ ಮಣಿಪುರದಲ್ಲಿ ಎರಡನೆ ಬಾರಿಗೆ ಬಿಜೆಪಿ ಗೆಲುವು ಸಾಧಿಸಿದಾಗಲೂ ಕೂಡಾ ಬಿಸ್ವಜಿತ್ ಸಿಂಗ್ ಮುಖ್ಯಸಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದರು. ಫಲಿತಾಂಶ ಪ್ರಕಟಗೊಂಡ ನಂತರವೂ ಶಾಸಕರು ಕಣ್ಣಾಮುಚ್ಚಾಲೆಯಲ್ಲಿ ಮುಳುಗಿದ್ದುದರಿಂದ, ಬಿಸ್ವಜಿತ್ ಸಿಂಗ್ ಬದಲಿಗೆ ಬಿರೇನ್ ಸಿಂಗ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಘೋಷಿಸಲು ಬಿಜೆಪಿಗೆ ಹತ್ತು ದಿನಗಳ ಕಾಲ ಹಿಡಿದಿತ್ತು.
ರವಿವಾರ ಬಿರೇನ್ ಸಿಂಗ್ ತಮ್ಮ ರಾಜೀನಾಮೆಯನ್ನು ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾರಿಗೆ ಸಲ್ಲಿಸಿದರು. ಆದರೆ, ಪರ್ಯಾಯ ವ್ಯವಸ್ಥೆ ಆಗುವವರೆಗೂ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವಂತೆ ರಾಜ್ಯಪಾಲರು ಬಿರೇನ್ ಸಿಂಗ್ ರಿಗೆ ಸೂಚಿಸಿದ್ದಾರೆ. ಒಂದು ವೇಳೆ ಒಮ್ಮತದ ಅಭ್ಯರ್ಥಿಯನ್ನು ತೀರ್ಮಾನಿಸಲು ಪಕ್ಷವು ವಿಫಲಗೊಂಡರೆ, ಬುಧವಾರ ಎಲ್ಲ ಶಾಸಕರನ್ನು ಹೊಸ ದಿಲ್ಲಿಗೆ ಕರೆಸಿಕೊಳ್ಳುತವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ಹೇಳಿವೆ.