ಮನಮೋಹನ್ ಸಿಂಗ್ ಅವರಿಂದ ಬಿಜೆಪಿ ಕ್ಷಮೆಯಾಚಿಸಬೇಕು: ಸಂಜಯ್ ರಾವತ್
ಏರ್ ಇಂಡಿಯಾ-ಇಂಡಿಯನ್ ಏರ್ಲೈನ್ಸ್ ವಿಲೀನ ಪ್ರಕರಣದಲ್ಲಿ ಸಿಬಿಐ ಮುಕ್ತಾಯ ವರದಿ ಸಲ್ಲಿಕೆ ವಿಚಾರ
ಸಂಜಯ್ ರಾವತ್ | Photo: PTI
ಮುಂಬೈ: ಏರ್ ಇಂಡಿಯಾ-ಇಂಡಿಯನ್ ಏರ್ಲೈನ್ಸ್ ವಿಲೀನ ಪ್ರಕರಣದಲ್ಲಿ ಸಿಬಿಐ ಮುಕ್ತಾಯ ವರದಿ (ಕ್ಲೋಶರ್ ರಿಪೋರ್ಟ್) ಸಲ್ಲಿಸಿರುವ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಂದ ಬಿಜೆಪಿ ಕ್ಷಮೆ ಕೋರಬೇಕು ಎಂದು ಶಿವಸೇನೆ (ಉದ್ಧವ್ ಬಣ) ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ಯುಪಿಎ ಆಡಳಿತದ ಅವಧಿಯಲ್ಲಿ ಏರ್ ಇಂಡಿಯಾ ಮತ್ತು ಇಂಡಿಯನ್ ಏರ್ಲೈನ್ಸ್ ವಿಲೀನದ ನಂತರ ರಚಿಸಲಾದ ಎನ್ಎಸಿಐಎಲ್ ಕಂಪನಿಗೆ ವಿಮಾನಗಳನ್ನು ಲೀಸ್ಗೆ ನೀಡುವಲ್ಲಿ ನಡೆದಿದೆಯೆನ್ನಲಾದ ಅವ್ಯವಹಾರ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ಮುಕ್ತಾಯ ವರದಿ ಸಲ್ಲಿಸಿದೆ. ಅವ್ಯವಹಾರ ಕುರಿತಂತೆ ಯಾವುದೇ ಪುರಾವೆ ದೊರೆತಿಲ್ಲ ಎಂಬ ಕಾರಣಕ್ಕೆ ಸಿಬಿಐ ಈ ಕ್ರಮ ಕೈಗೊಂಡಿದೆ.
ಈ ಲೀಸ್ ವ್ಯವಹಾರ ನಡೆದಾಗ ಆಗ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಈಗ ಎನ್ಸಿಪಿಯ ಅಜಿತ್ ಪವಾರ್ ಬಣದಲ್ಲಿರುವ ನಾಯಕ ಪ್ರಫುಲ್ ಪಟೇಲ್ ಕೇಂದ್ರ ನಾಗರಿಕ ವಾಯುಯಾನ ಸಚಿವರಾಗಿದ್ದರು.
ಮನಮೋಹನ್ ಸಿಂಗ್ ಆಡಳಿತದಲ್ಲಿ ನಡೆದಿದೆಯೆನ್ನಲಾದ ಈ ಅವ್ಯವಹಾರ ಕುರಿತಂತೆ ಬಿಜೆಪಿ ರಾದ್ಧಾಂತ ಸೃಷ್ಟಿಸಿತ್ತು, ಈಗ ಅದು ಸಿಂಗ್ ಅವರಿಂದ ಕ್ಷಮೆಯಾಚಿಸಬೇಕು ಎಂದು ಸಂಜಯ್ ರಾವತ್ ಹೇಳಿದರು.