ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸಗಢದಲ್ಲಿ ಸಾಮಾಜಿಕ ಜಾಲತಾಣ ಜಾಹೀರಾತುಗಳಿಗೆ ಕಾಂಗ್ರೆಸ್ಗಿಂತ ಹೆಚ್ಚು ಖರ್ಚು ಮಾಡಿದ್ದ ಬಿಜೆಪಿ
Photo: PTI
ಹೊಸದಿಲ್ಲಿ: ಇತ್ತೀಚೆಗೆ ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸಗಢದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಯ ಗಳಿಸಿರುವ ಬಿಜೆಪಿ ಈ ರಾಜ್ಯಗಳಲ್ಲಿ ಸಾಮಾಜಿಕ ಜಾಲತಾಣ ಜಾಹೀರಾತುಗಳಿಗೆ ಮಾಡಿದ ಖರ್ಚು ಕಾಂಗ್ರೆಸ್ ಈ ನಿಟ್ಟಿನಲ್ಲಿ ಮಾಡಿದ ಖರ್ಚಿಗಿಂತ ಹೆಚ್ಚಾಗಿದೆ ಎಂದು ʼಲೋಕನೀತಿ-ಸೆಂಟರ್ ಫಾರ್ ದಿ ಸ್ಟಡಿ ಸೊಸೈಟೀಸ್ʼ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.
ಅಧ್ಯಯನಕ್ಕಾಗಿ ಪಕ್ಷಗಳು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಜಾಹೀರಾತುಗಳಿಗೆ ಚುನಾವಣೆಗೆ ಮುಂಚಿತ 90 ದಿನಗಳಲ್ಲಿ ಮಾಡಿದ ವೆಚ್ಚವನ್ನು ಪರಿಗಣನೆಗೆ ತೆಗೆದುಕೊಂಡು ಈ ಅಧ್ಯಯನ ನಡೆಸಲಾಗಿದೆ. ನಾಯಕರು ವೈಯಕ್ತಿಕವಾಗಿ ಪ್ರಕಟಿಸಿದ ಅಥವಾ ಅಧಿಕೃತವಲ್ಲದ ಖಾತೆಗಳು ಪ್ರಕಟಿಸಿದ ಜಾಹೀರಾತುಗಳನ್ನು ಈ ಅಧ್ಯಯನಕ್ಕೆ ಪರಿಗಣಿಸಲಾಗಿಲ್ಲ.
ಮಧ್ಯ ಪ್ರದೇಶದಲ್ಲಿ ಬಿಜೆಪಿ ರೂ 94 ಲಕ್ಷ ವ್ಯಯಿಸಿದ್ದರೆ ಕಾಂಗೆಸ್ ಪಕ್ಷ ರೂ. 92 ಲಕ್ಷ ವ್ಯಯಿಸಿದೆ. ಸಾಮಾಜಿಕ ಜಾಲತಾಣ ಜಾಹೀರಾತುಗಳಿಗೆ ಎರಡೂ ಪಕ್ಷಗಳು ಮಾಡಿದ ಖರ್ಚಿನ ವ್ಯತ್ಯಾಸ ಮಧ್ಯಪ್ರದೇಶದಲ್ಲಿ ಮಾತ್ರ ಕಡಿಮೆಯಾಗಿದೆ.
ಛತ್ತೀಸಗಢದಲ್ಲಿ ಬಿಜೆಪಿಯ ಅಧಿಕೃತ ಖಾತೆಯು ಚುನಾವಣೆಗೆ ಮುಂಚಿತ 90 ದಿನಗಳಲ್ಲಿ ರೂ. 79.7 ಲಕ್ಷ ವ್ಯಯಿಸಿದ್ದರೆ ಕಾಂಗ್ರೆಸ್ ರೂ 4.7 ಲಕ್ಷ ವ್ಯಯಿಸಿತ್ತು.
ರಾಜಸ್ಥಾನದಲ್ಲಿ ಬಿಜೆಪಿ ವ್ಯಯಿಸಿದ ಮೊತ್ತ ರೂ 94 ಲಕ್ಷ ಆಗಿದ್ದರೆ ಕಾಂಗ್ರೆಸ್ ರೂ 2.18 ಲಕ್ಷ ಖರ್ಚು ಮಾಡಿತ್ತು.