ʼಅಕ್ರಮʼ ಹಣವನ್ನು ಬಿಜೆಪಿಗೆ ಹಿಂತಿರುಗಿಸಿದ ಚುನಾವಣಾಧಿಕಾರಿಗಳು: ಪ್ರಜಾಪ್ರಭುತ್ವದ ಮೇಲೆ ಬಿಜೆಪಿ ಸರ್ಜಿಕಲ್ ಸ್ಟ್ರೈಕ್ ಎಂದ ಕೃಷ್ಣ ಬೈರೇಗೌಡ
ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು: ಬಿಜೆಪಿ ನಾಯಕರು ಅಧಿಕಾರಿಗಳನ್ನೂ ದುರುಪಯೋಗ ಪಡಿಸಿಕೊಂಡಿದ್ದು, ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ಸರ್ಜಿಕಲ್ ಸ್ಟ್ರೈಕ್ ಆಗಿದೆ. ಈ ಗೋಲ್ಮಾಲ್ ಪ್ರಕರಣವನ್ನು ಚುನಾವಣಾ ಅಧಿಕಾರಿಗಳು ನ್ಯಾಯಯುತ ತನಿಖೆ ನಡೆಸಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಒತ್ತಾಯಿಸಿದ್ದಾರೆ.
ರವಿವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಅಕ್ರಮವಾಗಿ ಸಾಗಾಟ ನಡೆಸಿದ್ದ 2 ಕೋಟಿ ರೂ. ಹಣವನ್ನು ಚುನಾವಣಾ ಅಧಿಕಾರಿಗಳು ಶನಿವಾರ ಕಾಟನ್ ಪೇಟೆಯಲ್ಲಿಯಲ್ಲಿ ಜಪ್ತಿ ಮಾಡಿದ್ದಾರೆ. ಆದರೆ, ಆದಾಯ ತೆರಿಗೆ ಅಧಿಕಾರಿಗಳು ಜಪ್ತಿ ಮಾಡಲಾದ ಹಣಕ್ಕೆ ಕೇವಲ ನಾಲ್ಕು ಗಂಟೆಯ ಅವಧಿಯಲ್ಲಿ ಕ್ಲೀನ್ ಚಿಟ್ ನೀಡಿ, ಹಣವನ್ನೂ ಬಿಜೆಪಿಗೆ ಹಿಂತಿರುಗಿಸಿದೆ. ಇದು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದ್ದಾರೆ.
ಸಿಕ್ಕಿಬಿದ್ದ ಹಣಕ್ಕೆ ಸಂಬಂಧಿಸಿದಂತೆ ದಾಖಲೆ ನೀಡಿರುವ ಬಿಜೆಪಿ ಮಾ.27ರಂದೇ 5 ಕೋಟಿ ರೂ. ಹಣವನ್ನು ಕೆನೆರಾ ಬ್ಯಾಂಕ್ನಿಂದ ವಿತ್ಡ್ರಾ ಮಾಡಿ ಇಟ್ಟುಕೊಂಡಿರುವುದಾಗಿ ತಿಳಿಸಿದೆ. ಅಲ್ಲದೆ, ಈ ಹಣವನ್ನು ಚುನಾವಣಾ ಖರ್ಚಿಗಾಗಿ ಮೈಸೂರು, ಚಾಮರಾಜನಗರ ಹಾಗೂ ಮಂಗಳೂರಿಗೆ ಕಳುಹಿಸುತ್ತಿರುವುದಾಗಿ ಮಾಹಿತಿ ನೀಡಿದೆ. ಆದರೆ, ಈ ದಾಖಲೆಗಳು ಎಷ್ಟರ ಮಟ್ಟಿಗೆ ಸಾಚಾತನ ಹೊಂದಿವೆ ಎಂದು ಕೃಷ್ಣ ಬೈರೇಗೌಡ ಪ್ರಶ್ನಿಸಿದರು.
ನೀತಿ ಸಂಹಿತೆ ನಿರ್ದಿಷ್ಟಗೊಳಿಸಿರುವ ಶೇ.90ರಷ್ಟು ಹಣವನ್ನು ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಈಗಾಗಲೇ ಖರ್ಚು ಮಾಡಿದ್ದು, ಈ ಬಗ್ಗೆ ಅಧಿಕಾರಿಗಳು ಕನಿಷ್ಟ ತನಿಖೆ ನಡೆಸದೆ ಹೋದದ್ದು ವಿಪರ್ಯಾಸ ಎಂದು ಕೃಷ್ಣ ಬೈರೇಗೌಡ ಅಸಮಾಧಾನ ಹೊರಹಾಕಿದರು.
ಈ ಒಂದು ತಿಂಗಳಿನಿಂದ ಬಿಜೆಪಿ ಒಂದು ರೂಪಾಯಿಯನ್ನೂ ಚುನಾವಣೆಗಾಗಿ ಖರ್ಚು ಮಾಡಿಲ್ಲವೇ?, ಹೀಗೆ ಯಾವುದೋ ಉದ್ದೇಶಕ್ಕೆ ಬ್ಯಾಂಕಿನಿಂದ ಹಣ ಪಡೆದ ದಾಖಲೆಗಳನ್ನು ತೋರಿಸಿದಾಕ್ಷಣ ಅದರ ಸಾಚಾತನದ ಬಗ್ಗೆ ಕಿಂಚಿತ್ತೂ ತನಿಖೆ ನಡೆಸದೆ ಬೆಳಕಿನ ವೇಗದಲ್ಲಿ ಅಧಿಕಾರಿಗಳು ಹಣವನ್ನು ಹಿಂತಿರುಗಿಸಿದ್ದಾರೆ. ಹೀಗೆ ಯಾವುದೋ ದಾಖಲೆಗಳನ್ನು ತೋರಿಸಿ ಕಳ್ಳತನದಿಂದ ಸಿಕ್ಕಿಬಿದ್ದ ಹಣವನ್ನು ಬಿಡಿಸಿಕೊಳ್ಳುವುದಾದರೆ ಚುನಾವಣೆ ಪಾವಿತ್ರ್ಯತೆ ಉಳಿಯುವುದು ಹೇಗೆ ಸಾಧ್ಯ ಎಂದು ಕೃಷ್ಣ ಬೈರೇಗೌಡ ಪ್ರಶ್ನಿಸಿದರು.
50 ಸಾವಿರಕ್ಕೆ ಮೇಲ್ಪಟ್ಟ ಯಾವುದೇ ಹಣದ ವಹಿವಾಟುಗಳು ಬ್ಯಾಂಕ್ ಖಾತೆ ಅಥವಾ ಚೆಕ್ ಮೂಲಕ ನಡೆಯಬೇಕು ಎಂಬ ಕಾನೂನು ಇದೆ. ಚುನಾವಣಾ ಸಂದರ್ಭದಲ್ಲಿ ಇಪ್ಪತ್ತು ಸಾವಿರಕ್ಕಿಂತ ಹೆಚ್ಚಿನ ಹಣದ ವಹಿವಾಟನ್ನು ಚೆಕ್ ಮೂಲಕವೇ ನಡೆಸಬೇಕು ಎಂಬುದನ್ನು ಚುನಾವಣಾ ನೀತಿ ಸಂಹಿತೆಯೇ ಹೇಳುತ್ತದೆ. ಆದರೆ, ಈ ವಿಚಾರ ನಮ್ಮ ಅಧಿಕಾರಿಗಳಿಗೆ ಗೊತ್ತಿಲ್ಲದೆ ಹೋದದ್ದು ದುರಾದೃಷ್ಟಕರ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ದೇವೇಗೌಡರಿಗೆ ತಿರುಗೇಟು: ‘ಮೋದಿ ರಾಜ್ಯಕ್ಕೆ ಅಕ್ಷಯ ಪಾತ್ರೆ ನೀಡಿದ್ದಾರೆ’ ಎಂಬ ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕೃಷ್ಣ ಬೈರೇಗೌಡ, ದೇವೇಗೌಡರ ಕುಟುಂಬ ಹೇಗಿದ್ದರೂ ಪ್ರಧಾನಿ ಜೊತೆಗೆ ತುಂಬಾ ನಿಕಟವಾಗಿದೆ. ಅಲ್ಲದೆ, ಅವರು ರಾಜ್ಯಕ್ಕೆ ಅಕ್ಷಯ ಪಾತ್ರೆ ನೀಡಿದ್ದಾರೆ ಎಂದು ಕೊಂಡಾಡುತ್ತಿದ್ದಾರೆ. ಹಾಗಾದರೆ ಆ ಅಕ್ಷಯ ಪಾತ್ರೆಯಿಂದ ರಾಜ್ಯಕ್ಕೆ ಬರಬೇಕಾದ ಬರ ಪರಿಹಾರ ಕೊಡಿಸಿಬಿಡಿ ಎಂದು ತಿರುಗೇಟು ಕೊಟ್ಟರು.