TASMAC ಮುಖ್ಯ ಕಚೇರಿ ಎದುರು ಪ್ರತಿಭಟನೆ ಹಿನ್ನೆಲೆ: ಅಣ್ಣಾಮಲೈ ಸೇರಿದಂತೆ ಹಲವು ತಮಿಳುನಾಡು ಬಿಜೆಪಿ ನಾಯಕರ ಬಂಧನ

Screengrab:X/@PTI_News
ಚೆನ್ನೈ: ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮದಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಅದರ ಮುಖ್ಯ ಕಚೇರಿ ಎದುರು ಪ್ರತಿಭಟನೆ ನಡೆಸಲು ಮುಂದಾಗಿದ್ದ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ಹಾಗೂ ಮಾಜಿ ರಾಜ್ಯಪಾಲೆ ತಮಿಳ್ ಸಾಯಿ ಸೌಂದರ್ ರಾಜನ್ ಸೇರಿದಂತೆ ಹಲವು ಬಿಜೆಪಿ ನಾಯಕರನ್ನು ಪೊಲೀಸರು ಚೆನ್ನೈನಲ್ಲಿ ವಶಕ್ಕೆ ಪಡೆದಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ತೆರಳುತ್ತಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈರನ್ನು ಅಕ್ಕರೈನಲ್ಲಿರುವ ಅವರ ನಿವಾಸದಿಂದ ಸುಮಾರು ಒಂದು ಕಿಮೀ ದೂರದಲ್ಲಿ ಪೊಲೀಸರು ವಶಕ್ಕೆ ಪಡೆದರು.
ಅಲ್ಲದೆ, ಪ್ರತಿಭಟನಾ ಸ್ಥಳಕ್ಕೆ ತೆರಳಲು ತಮ್ಮ ಮನೆಯಿಂದ ಹೊರಗೆ ಬಂದ ತಮಿಳುನಾಡಿನ ಮಾಜಿ ರಾಜ್ಯಪಾಲೆ ತಮಿಳ್ ಸಾಯಿ ಸೌಂದರ್ ರಾಜನ್ ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇತ್ತೀಚೆಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದ ಜಾರಿ ನಿರ್ದೇಶನಾಲಯ, ತಮಿಳುನಾಡಿನಲ್ಲಿ ಮದ್ಯ ಮಾರಾಟದ ಮೇಲೆ ಏಕಸ್ವಾಮ್ಯ ಹೊಂದಿರುವ ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮದಿಂದ ಹೆಚ್ಚುವರಿ ಮದ್ಯ ಪೂರೈಕೆಗೆ ಆದೇಶ ಪಡೆಯಲು ಕೆಲವು ಮದ್ಯ ತಯಾರಿಕಾ ಸಂಸ್ಥೆಗಳು ಸುಮಾರು 1,000 ಕೋಟಿ ರೂ.ವರೆಗೆ ಕಿಕ್ ಬ್ಯಾಕ್ ನೀಡಿರುವ ದಾಖಲೆಗಳು ಲಭ್ಯವಾಗಿವೆ ಎಂದು ಆರೋಪಿಸಿತ್ತು. ಆದರೆ, ಈ ಆರೋಪಗಳನ್ನು ಅಲ್ಲಗಳೆದಿದ್ದ ತಮಿಳುನಾಡು ಅಬಕಾರಿ ಸಚಿವ ಸೆಂಥಿಲ್ ಬಾಲಾಜಿ, ಈ ಕುರಿತು ಜಾರಿ ನಿರ್ದೇಶನಾಲಯದ ಕಾನೂನು ಕ್ರಮ ಎದುರಿಸಲು ಸಿದ್ಧ ಎಂದು ಸವಾಲು ಹಾಕಿದ್ದರು.