ಜಾರ್ಖಂಡ್ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆ ಜಾರಿ : ಅಮಿತ್ ಶಾ
Photo: PTI
ರಾಂಚಿ: ಜಾರ್ಖಂಡ್ ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಜಾರಿಗೆ ತರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಘೋಷಿಸಿದ್ದು, ಆದಿವಾಸಿಗಳನ್ನು ಕಾಯ್ದೆ ವ್ಯಾಪ್ತಿಯಿಂದ ಹೊರಗಿಡುವುದಾಗಿ ಹೇಳಿದ್ದಾರೆ.
ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷದ ಪ್ರಣಾಳಿಕೆ 'ಸಂಕಲ್ಪ ಪತ್ರ'ವನ್ನು ಬಿಡುಗಡೆ ಮಾಡಿದ ಅಮಿತ್ ಷಾ, ನಮ್ಮ ಸರ್ಕಾರವು ಜಾರ್ಖಂಡ್ ನಲ್ಲಿ ಏಕರೂಪ ನಾಗರಿಕ ಸಂಹಿತೆ ಪರಿಚಯಿಸಲಿದೆ ಮತ್ತು ಬುಡಕಟ್ಟು ಜನರನ್ನು ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಲಿದ್ದೇವೆ. ಹೇಮಂತ್ ಸೊರೆನ್ ಮತ್ತು ಜೆಎಂಎಂ ಸರ್ಕಾರವು ಏಕರೂಪ ನಾಗರಿಕ ಸಂಹಿತೆ ಬುಡಕಟ್ಟು ಜನರು, ಅವರ ಸಂಸ್ಕೃತಿ ಮೇಲೆ ಪರಿಣಾಮ ಬೀರುತ್ತದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದೆ. ಇದು ಸಂಪೂರ್ಣವಾಗಿ ಆಧಾರರಹಿತವಾಗಿದೆ ಎಂದು ಹೇಳಿದ್ದಾರೆ.
ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಿದರೆ ಆದಿವಾಸಿಗಳ ಹಕ್ಕುಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಲಾಗುವುದು. ರಾಜ್ಯದಲ್ಲಿ ಆದಿವಾಸಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಒಳನುಸುಳುಕೋರರು ಇಲ್ಲಿಗೆ ಬಂದು ನಮ್ಮ ಹೆಣ್ಣುಮಕ್ಕಳಿಗೆ ಆಮಿಷವೊಡ್ಡಿ ಮದುವೆ ಮಾಡಿಕೊಂಡು ಭೂಮಿಯನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಇದನ್ನು ತಡೆಯದಿದ್ದರೆ, ಜಾರ್ಖಂಡ್ ನ ಸಂಸ್ಕೃತಿ, ಉದ್ಯೋಗ, ಭೂಮಿ ಉಳಿಯುವುದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದರೆ ಜಾರ್ಖಂಡ್ ನಲ್ಲಿ 2.87 ಲಕ್ಷ ಸರ್ಕಾರಿ ಉದ್ಯೋಗಗಳು ಸೇರಿದಂತೆ 5 ಲಕ್ಷ ಉದ್ಯೋಗಾವಕಾಶಗಳು ಸೃಷ್ಟಿ ಮಾಡಲಿದ್ದೇವೆ. ಜಾರ್ಖಂಡ್ ನಲ್ಲಿ ನುಸುಳುಕೋರರಿಂದ ಭೂಮಿಯನ್ನು ವಾಪಸ್ ಪಡೆಯಲು ಮತ್ತು ಅಕ್ರಮ ವಲಸಿಗರನ್ನು ಗುರುತಿಸಿ ಗಡಿಪಾರು ಮಾಡಲು ಕಾನೂನನ್ನು ತರಲಿದ್ದೇವೆ ಎಂದು ಹೇಳಿದ್ದಾರೆ.