ವಿರೋಧ ಪಕ್ಷಗಳ ಟೀಕೆಗಳ ನಡುವೆಯೇ ನಾಳೆ ಸಂವಿಧಾನ ಪೋರ್ಟಲ್ ಗೆ ಬಿಜೆಪಿ ಚಾಲನೆ
PC: PTI
ಹೊಸದಿಲ್ಲಿ: ಬಿಜೆಪಿ ದೇಶದ ಸಂವಿಧಾನವನ್ನು ಕಡೆಗಣಿಸಲು ಮತ್ತು ಬದಲಿಸಲು ಪ್ರಯತ್ನ ನಡೆಸುತ್ತಿದೆ ಎಂಬ ವಿರೋಧ ಪಕ್ಷಗಳ ಟೀಕೆಗಳ ನಡುವೆಯೇ ಕೇಂದ್ರ ಸರ್ಕಾರ , ನಾಗರಿಕರ ಕಾನೂನು ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ "ಹಮಾರಾ ಸಂವಿಧಾನ್, ಹಮಾರಾ ಸಮ್ಮಾನ್" ಎಂಬ ಸಂವಿಧಾನ ಪೋರ್ಟಲ್ಗೆ ಚಾಲನೆ ನೀಡಲು ನಿರ್ಧರಿಸಿದೆ.
ಭಾರತ ಗಣರಾಜ್ಯವಾಗಿ ಸಂವಿಧಾನವನ್ನು ಸ್ವೀಕರಿಸಿದ ದಿನದ 75ನೇ ವರ್ಷಾಚರಣೆ ಸಂಭ್ರಮಕ್ಕಾಗಿ ಪ್ರಯಾಗ್ ರಾಜ್ ನಲ್ಲಿ ಮಂಗಳವಾರ ಪೋರ್ಟಲ್ ಉದ್ಘಾಟಿಸಲು ನಿರ್ಧರಿಸಲಾಗಿದೆ.
ದೇಶಾದ್ಯಂತ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನದ ಅಂಗವಾಗಿ ಕಾನೂನು ಸಚಿವಾಲಯ, ವಿವಿಧ ಹೈಕೋರ್ಟ್ ಗಳು, ವಕೀಲರ ಸಂಘಗಳು, ಕಾನೂನು ವಿಶ್ವವಿದ್ಯಾನಿಲಯಗಳ ನೆರವಿನೊಂದಿಗೆ, ಎಲ್ಲರಿಗೂ ನ್ಯಾಯದ ಭರವಸೆ ನೀಡುವ ಸಲುವಾಗಿ ದೇಶಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಇಡೀ ವರ್ಷ ನಡೆಯುವ ಹಮಾರಾ ಸಂವಿಧಾನ್, ಹಮಾರಾ ಸಮ್ಮಾನ್ ಅಭಿಯಾನದ ಎರಡನೇ ಪ್ರಾದೇಶಿಕ ಕಾರ್ಯಕ್ರಮ ಪ್ರಯಾಗ್ ರಾಜ್ ನಲ್ಲಿ, ಕಾನೂನು ಸಚಿವಾಲಯದ ದಿಶಾ ಕಾರ್ಯಕ್ರಮದ ಅಂಗವಾಗಿ ನಡೆಯಲಿದೆ.
ಜನವರಿಯಲ್ಲಿ ಆರಂಭವಾಗಿರುವ ಈ ಅಭಿಯಾನ ಹಲವು ನಗರಗಳಲ್ಲಿ ನಡೆದಿದ್ದು, ಸಂವಿಧಾನದ ಬಗ್ಗೆ ಸರಳ ವಿಧಾನಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಾ ಬಂದಿದೆ. ಸಬ್ಕೊ ನ್ಯಾಯ್ ಹರ್ ಘರ್ ನ್ಯಾಯ್, ನವ್ ಭಾರತ್ ನವ್ ಸಂಕಲ್ಪ್, ವಿಧಿ ಜಾಗೃತಿ ಅಭಿಯಾನದಂತಹ ಉಪಕ್ರಮಗಳ ಮೂಲಕ ಈ ಕಾರ್ಯಕ್ರಮ ನಡೆಯುತ್ತಿದೆ.