ಮಧ್ಯಪ್ರದೇಶ ವಿಧಾನಸಭಾ ಚುನಾವಣೆ: ಟಿಕೆಟ್ ನಿರಾಕರಣೆ ಸುದ್ದಿ ತಿಳಿದು ಬಿಜೆಪಿ ನಾಯಕನಿಗೆ ಹೃದಯಾಘಾತ
ಉಮಾಶಂಕರ್ ಗುಪ್ತಾ (credit:news24online.com)
ಭೋಪಾಲ್: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಣೆ ಸುದ್ದಿ ತಿಳಿದ ನಂತರ ಹಿರಿಯ ಬಿಜೆಪಿ ನಾಯಕ ಉಮಾಶಂಕರ್ ಗುಪ್ತಾ (71) ಹೃದಯಾಘಾತಕ್ಕೀಡಾಗಿದ್ದು, ಅವರನ್ನು ಸೋಮವಾರ ಮಧ್ಯಾಹ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸುದ್ದಿ ತಿಳಿದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆಸ್ಪತ್ರೆಗೆ ಭೇಟಿ ನೀಡಿ, ಗುಪ್ತಾರ ಆರೋಗ್ಯ ಸ್ಥಿತಿ ಕುರಿತು ವಿಚಾರಿಸಿದರು.
ಮಾಜಿ ಗೃಹ ಸಚಿವ, ಭೋಪಾಲ್ನ ಮಾಜಿ ಮೇಯರ್ ಹಾಗೂ ನೈರುತ್ಯ ಭೋಪಾಲ್ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿರುವ ಉಮಾಶಂಕರ್ ಗುಪ್ತಾ, ಈ ಬಾರಿಯೂ ಅದೇ ಕ್ಷೇತ್ರದಿಂದಲೇ ಬಿಜೆಪಿಯಿಂದ ಸ್ಪರ್ಧಿಸಲು ಬಯಸಿದ್ದರು. ಆದರೆ, ಬಿಜೆಪಿಯು ಈ ಬಾರಿಯು ಹೊಸ ಮುಖವಾದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಭಗವಾನ್ದಾಸ್ ಸಬ್ನಾನಿ ಅವರಿಗೆ ಆ ಕ್ಷೇತ್ರದಿಂದ ಟಿಕೆಟ್ ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅನಂತ್ ಶ್ರೀ ಆಸ್ಪತ್ರೆಯ ವೈದ್ಯರೊಬ್ಬರು, "ಅವರಿಗೆ ಹೃದಯಾಘಾತವಾಗಿತ್ತು. ಹೀಗಾಗಿ ಆಂಜಿಯೊಗ್ರಫಿ ಮಾಡಿದಾಗ ಅವರ ರಕ್ತನಾಳದಲ್ಲಿ ಸಮಸ್ಯೆ ಕಂಡು ಬಂದಿದ್ದು, ಆಂಜಿಯೋಪ್ಲ್ಯಾಸ್ಟಿಯನ್ನು ನೆರವೇರಿಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.