ಬಿಜೆಪಿ ಮೀಸಲಾತಿಯನ್ನು ಅಂತ್ಯಗೊಳಿಸಲು ಬಯಸುತ್ತದೆ: ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್ | PC : PTI
ಲಕ್ನೌ: ಮೀಸಲಾತಿಯನ್ನು ಅಂತ್ಯಗೊಳಿಸುವ ಉದ್ದೇಶದಿಂದ ಬಿಜೆಪಿ 400ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲು ಬಯಸುತ್ತಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತೆ ಪುನರುಚ್ಛರಿಸಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮುಂದಿನ ಪ್ರಧಾನಿಯನ್ನಾಗಿಸಲಾಗುವುದು ಹಾಗೂ ಆದಿತ್ಯನಾಥ್ ಅವರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಹುದ್ದೆಯಿಂದ ಕೈಬಿಡಲಾಗುವುದು ಎಂದು ಕೇಜ್ರಿವಾಲ್ ಹೇಳಿದರು.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಜೊತೆಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕೇಜ್ರಿವಾಲ್, “ಬಿಜೆಪಿ ಜನರು ಯಾವತ್ತೂ ಮೀಸಲಾತಿಗೆ ವಿರುದ್ಧವಾಗಿದ್ದರು. ಅವರು ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸಿ ಎಸ್ಸಿ/ಎಸ್ಟಿ/ಒಬಿಸಿ ಮೀಸಲಾತಿ ಬದಲಾಯಿಸುತ್ತಾರೆ,” ಎಂದು ಹೇಳಿದರು.
ಬಿಜೆಪಿಯಲ್ಲಿ 75 ವರ್ಷ ದಾಟಿದ ಯಾರಿಗೂ ಯಾವುದೇ ಹುದ್ದೆ ನೀಡಬಾರದು ಮತ್ತು ಅವರಿಗೆ ನಿವೃತ್ತಿ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ನಿಯಮ ತಂದಿದ್ದಾರೆ. ಈ ನೀತಿಯಂತೆಯೇ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಸಹಿತ ಹಲವರನ್ನು ನಿವೃತ್ತಗೊಳಿಸಲಾಯಿತು. ಪ್ರಧಾನಿ ಮುಂದಿನ ವರ್ಷ 75 ವರ್ಷ ದಾಟುತ್ತಾರೆ ಹಾಗೂ ಅಮಿತ್ ಶಾ ಅವರನ್ನು ದೇಶದ ಮುಂದಿನ ಪ್ರಧಾನಿಯಾಗಿಸಲು ಬಯಸುತ್ತಾರೆ,” ಎಂದು ಕೇಜ್ರಿವಾಲ್ ಹೇಳಿದರು.
“ಅಡ್ಡಿಯಾಗಬಹುದೆಂದು ತಿಳಿಯಲಾದ ನಾಯಕರನ್ನು ಬದಿಗೆ ಸರಿಸಲಾಗಿದೆ. ಶಿವರಾಜ್ ಸಿಂಗ್ ಚೌಹಾಣ್, ವಸುಂಧರಾ ರಾಜೇ, ರಮಣ್ ಸಿಂಗ್, ದೇವೇಂದ್ರ ಫಡ್ನವೀಸ್ ಮತ್ತು ಮನೋಹರ್ ಲಾಲ್ ಖಟ್ಟರ್ ಅವರನ್ನು ಬದಿಗೆ ಸರಿಸಲಾಗಿದೆ. ಅಮಿತ್ ಶಾ ಹಾದಿಗೆ ಮುಳ್ಳಾಗಬಲ್ಲರೆಂದು ತಿಳಿಯಲಾದ ವ್ಯಕ್ತಿ ಆದಿತ್ಯನಾಥ್. ಬಿಜೆಪಿ ಸರ್ಕಾರ ರಚನೆಯಾದರೆ ಎರಡು ತಿಂಗಳಲ್ಲಿ ಆದಿತ್ಯನಾಥ್ ಅವರನ್ನು ಕೆಳಗಿಳಿಸಲು ನಿರ್ಧರಿಸಿದ್ದಾರೆ,” ಎಂದು ಕೇಜ್ರಿವಾಲ್ ಹೇಳಿಕೊಂಡರು.
ಬಿಜೆಪಿ 220ಕ್ಕೂ ಕಡಿಮೆ ಸ್ಥಾನಗಳನ್ನು ಗಳಿಸಲಿದೆ ಎಂದು ದೇಶಾದ್ಯಂತದ ಟ್ರೆಂಡ್ಗಳು ತಿಳಿಸುತ್ತವೆ. ಬಿಜೆಪಿ ಪಂಜಾಬ್ನಲ್ಲಿ ಒಂದೇ ಒಂದು ಸ್ಥಾನ ಗೆಲ್ಲುವುದಿಲ್ಲ,” ಎಂದು ಅವರು ಹೇಳಿದರು.
ಅಖಿಲೇಶ್ ಯಾದವ್ ಮಾತನಾಡಿ, ಬಿಜೆಪಿ 543 ಲೋಕಸಭಾ ಸ್ಥಾನಗಳ ಪೈಕಿ ಕೇವಲ 143 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದರು.