2026ರಲ್ಲಿ ಪಶ್ಚಿಮ ಬಂಗಾಳ ಸರದಿ: ಮಮತಾ ಬ್ಯಾನರ್ಜಿಗೆ ಬಿಜೆಪಿ ಎಚ್ಚರಿಕೆ

ಸುವೇಂದು ಅಧಿಕಾರಿ / ಮಮತಾ ಬ್ಯಾನರ್ಜಿ (PTI)
ಕೋಲ್ಕತ್ತಾ: 27 ವರ್ಷಗಳ ನಂತರ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬೆನ್ನಿಗೇ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಸುವೇಂದು ಅಧಿಕಾರಿ, 2026ರಲ್ಲಿ ಪಶ್ಚಿಮ ಬಂಗಾಳದ ಸರದಿಯಾಗಿದ್ದು, ಈ ಚುನಾವಣೆಯಲ್ಲಿ ಬಿಜೆಪಿಯು ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸುವೇಂದು ಅಧಿಕಾರಿ, “ದಿಲ್ಲಿಯ ಗೆಲುವು ನಮ್ಮದಾಗಿದೆ. 2026ರಲ್ಲಿ ಬಂಗಾಳದ ಸರದಿಯಾಗಿದೆ” ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿಯು, 2011ರಿಂದ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿಯ ಆಡಳಿತವನ್ನು ಅಂತ್ಯಗೊಳಿಸುವ ಗುರಿ ಹೊಂದಿದೆ. 288 ಸ್ಥಾನಗಳನ್ನು ಹೊಂದಿರುವ ಪೂರ್ವ ರಾಜ್ಯವಾದ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯು ಮುಂದಿನ ವರ್ಷ ನಡೆಯಲಿದೆ.
ಆಪ್ ವಿರುದ್ಧ ವಾಗ್ದಾಳಿ ನಡೆಸಿದ ಸುವೇಂದು ಅಧಿಕಾರಿ, “ಇದು ದಿಲ್ಲಿಯಲ್ಲಿನ ದುರಂತದ ಅಂತ್ಯವಾಗಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿರುವ ಬಂಗಾಳಿ ಜನರು ಬಿಜೆಪಿಗೆ ಮತ ಚಲಾಯಿಸಿದ್ದಾರೆ” ಎಂದು ಹೇಳಿದ್ದಾರೆ.
“ದುರಂತವು ಅಂತ್ಯಗೊಂಡಿದೆ. ಜನರು ಅವರಿಗೆ (ಆಪ್) ತಕ್ಕ ಉತ್ತರ ನೀಡಿದ್ದಾರೆ. ಕೇವಲ ಪ್ರಧಾನಿ ನರೇಂದ್ರ ಮೋದಿ ಮಾತ್ರ ದಿಲ್ಲಿಯ ವೈಭವವನ್ನು ಮರಳಿ ತಂದು, ಅದನ್ನು ಸ್ವಚ್ಛ ನಗರವನ್ನಾಗಿಸಬಲ್ಲರು. ನಾನು ದಿಲ್ಲಿಯ ಬಂಗಾಳಿ ಬಾಹುಳ್ಯದ ಪ್ರದೇಶಗಳಲ್ಲಿ ಪ್ರಚಾರ ನಡೆಸಿದ್ದೆ. ಆದರೆ, ಅಲ್ಲಿ ಮೂಲಸೌಕರ್ಯಗಳು ತುಂಬಾ ಕಳಪೆ ಸ್ಥಿತಿಯಲ್ಲಿವೆ. ಅವರು ದಿಲ್ಲಿಯನ್ನು ನಾಶಗೊಳಿಸಿದ್ದಾರೆ. ದಿಲ್ಲಿಯ ಬಹುತೇಕ ಬಂಗಾಳಿ ಬಾಹುಳ್ಯದ ಪ್ರದೇಶಗಳಲ್ಲಿ ಬಿಜೆಪಿ ಸುಲಭ ಗೆಲುವು ಕಂಡಿದೆ” ಎಂದು ಅವರು ತಿಳಿಸಿದ್ದಾರೆ.
ಈ ನಡುವೆ, ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದರಿಂದ ಪಶ್ಚಿಮ ಬಂಗಾಳ ಬಿಜೆಪಿಯಲ್ಲಿ ಹೊಸ ಹುರುಪು ಮೂಡಿದೆ. ಸುವೇಂದು ಅಧಿಕಾರಿಯ ಮಾತುಗಳನ್ನು ಪುನರುಚ್ಚರಿಸಿರುವ ಸಿಲಿಗುರಿ ಬಿಜೆಪಿ ಮುಖ್ಯಸ್ಥ ಅರುಣ್ ಮಂಡಲ್, “ದಿಲ್ಲಿಯಲ್ಲಿ ವಾಸಿಸುತ್ತಿರುವ ಬಂಗಾಳಿಗಳು ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಮತ ಚಲಾಯಿಸಿದ್ದಾರೆ. 2026ರಲ್ಲಿ ಅವರ ಕುಟುಂಬಗಳು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮತ ಚಲಾಯಿಸಲಿವೆ. 2026ರಲ್ಲಿ ತೃಣಮೂಲ ಕಾಂಗ್ರೆಸ್ ನೇತೃತ್ವದ ಸರಕಾರದ ಭ್ರಷ್ಟಾಚಾರದ ವಿರುದ್ಧ ಜನರು ಮತ ಚಲಾಯಿಸಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.