ಹರ್ಯಾಣದಲ್ಲಿ ಬಿಜೆಪಿ ಜಯಭೇರಿ | ಸಿಎಂ ಸ್ಥಾನಕ್ಕೆ ಮರಳಲಿದ್ದಾರೆಯೇ ಮನೋಹರ್ ಲಾಲ್ ಖಟ್ಟರ್?
ಕಾಶ್ಮೀರದಲ್ಲಿ ಕಾಂಗ್ರೆಸ್ ಮೈತ್ರಿಕೂಟ ಅಧಿಕಾರದತ್ತ
ಮನೋಹರ್ ಲಾಲ್ ಖಟ್ಟರ್ | PTI
ಚಂಡೀಗಡ : ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ರಚನೆಯತ್ತ ದಾಪುಗಾಲು ಹಾಕಿದ್ದು, ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಏರುತ್ತಿದೆ. ಪಕ್ಷದ ದಿಲ್ಲಿ ಕಚೇರಿಯಲ್ಲಿ ಗೆಲುವಿನ ಸಂಭ್ರಮಾಚರಣೆ ಆರಂಭವಾಗಿದೆ. ಬಿಜೆಪಿ ಪಕ್ಷದ ಹೈಕಮಾಂಡ್ ಈ ವಿಶೇಷ ಆಚರಣೆಗೆ ಸಿದ್ಧತೆ ನಡೆಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಕೇಂದ್ರ ಕಚೇರಿಗೆ ಆಗಮಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಗೆಲುವನ್ನು ಆಚರಿಸಲು ಬಿಜೆಪಿ ಕೇಂದ್ರ ಕಚೇರಿ 100 ಕೆಜಿ ಜಿಲೇಬಿಗೆ ಆರ್ಡರ್ ಮಾಡಿದೆ ಎಂದು ತಿಳಿದು ಬಂದಿದೆ.
ಇನ್ನೊಂದೆಡೆ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಪಕ್ಷದ ಎಲ್ಲಾ ಪ್ರಧಾನ ಕಾರ್ಯದರ್ಶಿಗಳ ಸಭೆ ಕರೆದಿದ್ದು, ನಡ್ಡಾ ನಿವಾಸದಲ್ಲಿನ ನಡೆದಿರುವ ಸಭೆಯಲ್ಲಿ ಪ್ರಸ್ತುತ ರಾಜಕೀಯ ಸನ್ನಿವೇಶ ಮತ್ತು ಚುನಾವಣಾ ಫಲಿತಾಂಶಗಳ ಕುರಿತು ಚರ್ಚಿಸಿರುವುದಾಗಿ ತಿಳಿದುಬಂದಿದೆ.
ಹರ್ಯಾಣ ಮಾಜಿ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಮತ್ತೆ ಸಿಎಂ ಆಗುವ ಸಾಧ್ಯತೆ ಇದೆ ಎಂದು ವದಂತಿ ಹರಡಿದೆ. ಹಾಲಿ ಸಿಎಂ ನಯಾಬ್ ಸಿಂಗ್ ಸೈನಿ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಖಟ್ಟರ್ ದಿಲ್ಲಿಗೆ ಹೋಗಿದ್ದು ಮೋದಿ ಸರಕಾರದಲ್ಲಿ ಸಚಿವರಾಗಿದ್ದಾರೆ. ಅವರು ಮತ್ತೆ ಹರ್ಯಾಣಕ್ಕೆ ಮರಳುವ ಸಾಧ್ಯತೆ ಇದೆಯೆಂದು ಹೇಳಲಾಗುತ್ತಿದೆ. ಆದರೆ ಪಕ್ಷಕ್ಕೆ ಜಯ ತಂದು ಕೊಟ್ಟಿರುವ ಹಾಲಿ ಸಿಎಂ ಅನ್ನು ಕೈ ಬಿಡುತ್ತಾರಾ ಬಿಜೆಪಿ ವರಿಷ್ಠರು ಎಂದು ಕಾದು ನೋಡಬೇಕಿದೆ.
ಹರ್ಯಾಣದಲ್ಲಿ ಆಡಳಿತಾರೂಢ ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ಈ ಚುನಾವಣೆ ಫಲಿತಾಂಶ ದೊಡ್ಡ ಪಾಠ ಎಂದು ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಚುನಾವಣೆಯಲ್ಲಿ ಅತಿಯಾದ ಆತ್ಮವಿಶ್ವಾಸ ಇರಬಾರದು. ಯಾರೂ ಯಾವತ್ತೂ ಅತಿಯಾದ ಆತ್ಮವಿಶ್ವಾಸವನ್ನು ಹೊಂದಿರಬಾರದು ಎಂಬುದಕ್ಕೆ ಹರ್ಯಾಣದ ಫಲಿತಾಂಶ ದೊಡ್ಡ ಪಾಠ ಕೇಜ್ರಿವಾಲ್ ಪರೋಕ್ಷವಾಗಿ ಕಾಂಗ್ರೆಸ್ ಅನ್ನು ಕುಟುಕಿದ್ದಾರೆ.
ಎಎಪಿ ಪುರಸಭೆ ಕೌನ್ಸಿಲರ್ಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಯಾವುದೇ ಚುನಾವಣೆಯನ್ನು ಲಘುವಾಗಿ ಪರಿಗಣಿಸಬಾರದು. ಪ್ರತಿ ಚುನಾವಣೆ ಮತ್ತು ಪ್ರತಿ ಸ್ಥಾನವನ್ನು ಗೆಲ್ಲುವುದು ಕಠಿಣವಾಗಿರುತ್ತದೆ ಎಂದಿದ್ದಾರೆ.
ಕುಸ್ತಿಪಟು ವಿನೇಶ್ ಫೋಗಟ್ ಅವರು ಬಿಜೆಪಿ ಅಭ್ಯರ್ಥಿ ಯೋಗೀಶ್ ಕುಮಾರ್ ಅವರನ್ನು 6,015 ಮತಗಳ ಅಂತರದಿಂದ ಸೋಲಿಸಿದ್ಧಾರೆ. ಮತ ಎಣಿಕೆಯುದ್ದಕ್ಕೂ ಫೋಗಟ್ ಮತ್ತು ಯೋಗೀಶ್ ನಡುವೆ ನಿಕಟ ಪೈಪೋಟಿ ಏರ್ಪಟ್ಟಿತ್ತು. ನಡುವೆ ಒಂದು ಹಂತದಲ್ಲಿ ಫೋಗಟ್ ತುಸು ಹಿನ್ನಡೆ ಅನುಭವಿಸಿದ್ದರು. ಕುಸ್ತಿಗೆ ವಿದಾಯ ಹೇಳಿ ರಾಜಕೀಯ ಸೇರಿದ ಬಳಿಕ ಇದು ಅವರ ಚೊಚ್ಚಲ ಚುನಾವಣೆಯಾಗಿದ್ದು, ಭರ್ಜರಿ ಗೆಲುವು ಸಾಧಿಸಿದ್ದಾರೆ.
ಹರ್ಯಾಣದಲ್ಲಿ ಜನರು ನೀಡಿರುವ ತೀರ್ಪನ್ನು ಒಪ್ಪುತ್ತೇವೆ ಎಂದು ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಹರ್ಯಾಣದಲ್ಲಿ ಕಾಂಗ್ರೆಸ್ ಗೆ ಗೆಲ್ಲುವ ವಿಶ್ವಾಸವಿತ್ತು. ಎಲ್ಲಿ ಎಡವಿದೆವು ಎನ್ನುವುದನ್ನು ಪರಿಶೀಲಿಸಬೇಕಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿನ ಫಲಿತಾಂಶದಿಂದ ಬಿಜೆಪಿ ಪಾಠ ಕಲಿಯಬೇಕಾಗಿದೆ ಎಂದು ಪಿಡಿಪಿ ಅಭ್ಯರ್ಥಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ. ಕಾಂಗ್ರೆಸ್ – ಎನ್ಸಿ ಮೈತ್ರಿ ಸರ್ಕಾರ ರಚಿಸುತ್ತಿದ್ದು, ಮೈತ್ರಿಕೂಟ ಸರ್ಕಾರದ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸಕೂಡದು ಎಂದು ಎಂದು ಎಚ್ಚರಿಸಿದ್ದಾರೆ.
ಎರಡೂ ರಾಜ್ಯಗಳಲ್ಲಿನ ಫಲಿತಾಂಶ :
ಹರ್ಯಾಣದಲ್ಲಿ,
ಬಿಜೆಪಿ – 47 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
ಕಾಂಗ್ರೆಸ್ ಮೈತ್ರಿ – 35 ಕ್ಷೇತ್ರಗಳಲ್ಲಿ ಗೆಲುವುದು ಸಾಧಿಸಿದ್ದು, 2 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.
INLD ಮೈತ್ರಿ 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಪಕ್ಷೇತರರು – 3 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.
ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ ಮತ್ತು ಎನ್ಸಿ ಮೈತ್ರಿ ಸರಳ ಬಹುಮತ ದಾಟಿ ಮುನ್ನಡೆದಿದೆ.
ಕಾಂಗ್ರೆಸ್ + ಎನ್ಸಿ – 49 ಸ್ಥಾನಗಳಲ್ಲಿ ಗೆಲುವು.
ಬಿಜೆಪಿ – 29 ಕ್ಷೇತ್ರಗಳಲ್ಲಿ ಗೆಲುವು.
ಪಿಡಿಪಿ – 3 ಕ್ಷೇತ್ರಗಳಲ್ಲಿ ಗೆದ್ದಿದೆ.
ಪಕ್ಷೇತರರು – 8 ಸ್ಥಾನಗಳಲ್ಲಿ ಗೆದ್ದಿದ್ದಾರೆ.