ತ್ರಿಪುರಾ ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ | ಶೇ. 97ರಷ್ಟು ಸ್ಥಾನಗಳಲ್ಲಿ ಜಯ
ಅಗರ್ತಲಾ: ತ್ರಿಪುರಾದಲ್ಲಿ ಆಡಳಿತ ಬಿಜೆಪಿಯು ಅಲ್ಲಿನ ಪಂಚಾಯತ್ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದು ಶೇ. 97ರಷ್ಟು ಸ್ಥಾನಗಳಲ್ಲಿ ಜಯ ಗಳಿಸಿದೆ.
ಗ್ರಾಮ ಪಂಚಾಯತ್, ಪಂಚಾಯತ್ ಸಮಿತಿಗಳು ಮತ್ತು ಜಿಲ್ಲಾ ಪರಿಷತ್ ಗಳ ಶೇ.71ರಷ್ಟು ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ ಶೇ29ರಷ್ಟು ಸ್ಥಾನಗಳಿಗೆ ಆಗಸ್ಟ್ 8ರಂದು ಚುನಾವಣೆ ನಡೆದಿತ್ತು. ಮತ ಎಣಿಕೆ ಮಂಗಳವಾರ ನಡೆದಿದೆ.
ಒಟ್ಟು 606 ಗ್ರಾಮ ಪಂಚಾಯತ್‌ಗಳ ಪೈಕಿ 584ರಲ್ಲಿ 35 ಪಂಚಾಯತ್ ಸಮಿತಿಗಳಲ್ಲಿ 34ರಲ್ಲಿ ಹಾಗೂ ಎಂಟು ಜಿಲ್ಲಾ ಪರಿಷತ್ಗಳ ಪೈಕಿ ಎಲ್ಲದರಲ್ಲೂ ಬಿಜೆಪಿ ಜಯ ಗಳಿಸಿದೆ.
ಎಂಟು ಜಿಲ್ಲಾ ಪರಿಷತ್ ಗಳ 96 ಸ್ಥಾನಗಳ ಪೈಕಿ 93ರಲ್ಲಿ ಬಿಜೆಪಿ ಜಯ ಗಳಿಸಿದ್ದರೆ ಕಾಂಗ್ರೆಸ್ ಮತ್ತು ಸಿಪಿಐಎಂ ಕ್ರಮವಾಗಿ ಎರಡು ಮತ್ತು ಒಂದು ಸ್ಥಾನಗಳಲ್ಲಿ ಜಯ ಗಳಿಸಿವೆ.
ಪಂಚಾಯತ್ ಸಮಿತಿಗಳ ಒಟ್ಟು 188 ಸ್ಥಾನಗಳಲ್ಲಿ 173ರಲ್ಲಿ ಬಿಜೆಪಿ ಜಯ ಗಳಿಸಿದ್ದು ಸಿಪಿಐಎಂ ಆರರಲ್ಲಿ ಮತ್ತು ಕಾಂಗ್ರೆಸ್ ಎಂಟರಲ್ಲಿ ಜಯ ಗಳಿಸಿವೆ.
ಒಟ್ಟು 1,819 ಗ್ರಾಮ ಪಂಚಾಯತ್ ಸ್ಥಾನಗಳ ಪೈಕಿ 1,476ರಲ್ಲಿ ಬಿಜೆಪಿ ಜಯ ಗಳಿಸಿದೆ, ಸಿಪಿಐಎಂ 148ರಲ್ಲಿ, ಕಾಂಗ್ರೆಸ್ 151ರಲ್ಲಿ ಹಾಗೂ ತಿಪ್ರ ಮೊತಾ 24ರಲ್ಲಿ ಜಯ ಗಳಿಸಿವೆ.