ಬಿಜೆಪಿಯಿಂದ ಸಂವಿಧಾನದ ಮೇಲೆ ‘4ಡಿ’ ದಾಳಿ: ಕಾಂಗ್ರೆಸ್ ಸಂಸದ ಗೌರವ್ ಗೊಗೋಯಿ ವಾಗ್ದಾಳಿ

ಗೌರವ್ ಗೊಗೋಯಿ | PC : PTI
ಹೊಸದಿಲ್ಲಿ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಬುಧವಾರ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಿದ ಬಳಿಕ, ಕಾಂಗ್ರೆಸ್ ಸಂಸದ ಗೌರವ್ ಗೊಗೋಯಿ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿ ನೇತೃತ್ವದ ಸರಕಾರವು ಅಲ್ಪಸಂಖ್ಯಾತರನ್ನು ಅವಮಾನಿಸಲು ಮತ್ತು ಅವರನ್ನು ಮತದಾನ ಹಕ್ಕಿನಿಂದ ವಂಚಿಸಲು ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಆರೋಪಿದ ಅವರು, ಅದು ‘‘ಸಂವಿಧಾನದ ಮೇಲೆ ‘4ಡಿ’ ದಾಳಿಯನ್ನು ನಡೆಸುತ್ತಿದೆ’’ ಎಂದರು.
ಕನಿಷ್ಠ ಐದು ವರ್ಷಗಳಿಂದ ಇಸ್ಲಾಮ್ ಧರ್ಮವನ್ನು ಅನುಸರಿಸುತ್ತಿರುವ ಓರ್ವ ಮುಸ್ಲಿಮ್ ವ್ಯಕ್ತಿ ಮಾತ್ರ ದೇಣಿಗೆಗಳನ್ನು ನೀಡಬಹುದಾಗಿದೆ ಎಂಬ ವಿವಾದಾಸ್ಪದ ವಿಧಿಯ ಬಗ್ಗೆ ಅವರು ಸರಕಾರವನ್ನು ಪ್ರಶ್ನಿಸಿದರು. ‘ಧಾರ್ಮಿಕ ಪ್ರಮಾಣಪತ್ರ’ಗಳನ್ನು ನೀಡುವ ನೀಡುವ ಹೊಣೆಯನ್ನು ಸರಕಾರವು ತಾನೇ ವಹಿಸಿಕೊಂಡಿರುವಾಗ, ಈ ವಿಧಿಯು ಅತ್ಯಂತ ನಿರಾಶಾದಾಯಕ ಪರಿಸ್ಥಿತಿಯೊಂದನ್ನು ಸೃಷ್ಟಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಹೇಳಿದರು.
‘‘ಇಂದು ಅಲ್ಪಸಂಖ್ಯಾತರ ಪರಿಸ್ಥಿತಿ ಏನಾಗಿದೆಯೆಂದರೆ, ಅವರ ಧರ್ಮದ ಪ್ರಮಾಣ ಪತ್ರಗಳನ್ನು ಸರಕಾರವೇ ನೀಡುತ್ತಿದೆ. ಇತರ ಧರ್ಮಗಳಿಂದಲೂ ಸರಕಾರ ಇಂಥದೇ ಪ್ರಮಾಣಪತ್ರಗಳನ್ನು ಕೇಳುತ್ತದೆಯೇ? ನಿರ್ದಿಷ್ಟ ಧರ್ಮದಲ್ಲಿ ಐದು ವರ್ಷಗಳನ್ನು ನೀವು ಪೂರೈಸಿದ್ದೀರಾ ಎಂದು ಅದು ಕೇಳುತ್ತದೆಯೇ? ಇದನ್ನು ಮುಸ್ಲಿಮರಿಗೆ ಮಾತ್ರ ಯಾಕೆ ಕೇಳಲಾಗುತ್ತಿದೆ? ಸರಕಾರವು ಧರ್ಮದಲ್ಲಿ ಯಾಕೆ ಹಸ್ತಕ್ಷೇಪ ನಡೆಸುತ್ತಿದೆ?’’ ಎಂದು ಅವರು ಪ್ರಶ್ನಿಸಿದರು.
ಸಚಿವ ರಿಜಿಜು ಅವರ ಭಾಷಣಕ್ಕೆ ಸುದೀರ್ಘ ಪ್ರತಿಕ್ರಿಯೆ ನೀಡಿದ ಅಸ್ಸಾಮ್ ನಾಯಕ, ಸಚಿವರು ತಪ್ಪು ದಾರಿಗೆಳೆಯುವ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದರು.
‘‘ಈ ಮಸೂದೆಯು ಸಂವಿಧಾನದ ಮೇಲಿನ ದಾಳಿಯಾಗಿದೆ. ಸರಕಾರವು ಸಂವಿಧಾನದ ಮೇಲೆ 4ಡಿ ದಾಳಿ ನಡೆಸುತ್ತಿದೆ. 4ಡಿ ಯಾವುದೆಂದರೆ- ಸಂವಿಧಾನವನ್ನು ‘ಡೈಲ್ಯೂಟ್’ (ದುರ್ಬಲ) ಮಾಡುವುದು, ಅಲ್ಪಸಂಖ್ಯಾತರನ್ನು ‘ಡೀಫೇಮ್’ (ಅವಮಾನ) ಮಾಡುವುದು ಮತ್ತು ಅವರನ್ನು ‘ಡಿಸ್ಎನ್ಫ್ರಾಂಚೈಸ್’ (ಮತದಾನ ಹಕ್ಕಿನಿಂದ ವಂಚಿತರನ್ನಾಗಿ) ಮಾಡುವುದು ಹಾಗೂ ಭಾರತೀಯ ಸಮಾಜವನ್ನು ‘ಡಿವೈಡ್’ (ವಿಭಜನೆ) ಮಾಡುವುದು’’ ಎಂದು ಗೊಗೋಯಿ ಹೇಳಿದರು.
‘‘ಇದು ವಕ್ಫ್ ಕಾನೂನುಗಳ ಸುಧಾರಣೆ ಎಂಬುದಾಗಿ ರಿಜಿಜು ತನ್ನ ಭಾಷಣದಲ್ಲಿ ಹೇಳಿದ್ದಾರೆ. ಆದರೆ, ಇದು ಚುನಾವಣಾ ಪ್ರಕ್ರಿಯೆಯನ್ನು ದುರ್ಬಲಗೊಳಿಸಲು ಮತ್ತು ಕೋಮು ಸೌಹಾರ್ದವನ್ನು ನಾಶಗೊಳಿಸಲು ಬಿಜೆಪಿಗೆ ಸಹಾಯ ಮಾಡುವ ವಿಷಯವಾಗಿದೆ’’ ಎಂದರು.
‘‘ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸೋಮವಾರ ಈದ್ ಪ್ರಾರ್ಥನೆಗಳನ್ನು ಮಾಡಲು ಮುಸ್ಲಿಮರಿಗೆ ಅವಕಾಶ ನೀಡಲಾಗಿಲ್ಲ’’ ಎಂದು ಹೇಳಿಕೊಂಡ ಅವರು, ‘‘ಅಲ್ಪಸಂಖ್ಯಾತರನ್ನು ಮತ್ತಷ್ಟು ಅವಹೇಳನಕ್ಕೆ ಗುರಿಪಡಿಸಲು ಸರಕಾರವು ವಕ್ಫ್ ಕಾನೂನುಗಳಲ್ಲಿನ ಬದಲಾವಣೆಯನ್ನು ಬಳಸಿಕೊಳ್ಳುತ್ತದೆ’’ ಎಂದು ಆರೋಪಿಸಿದರು.