ಕೇರಳದಲ್ಲಿ ಬಿಜೆಪಿಯ ಕೋಮುವಾದಿ ರಾಜಕಾರಣ ಬೇರೂರಲು ಅವಕಾಶ ನೀಡುವುದಿಲ್ಲ: ಪಿಣರಾಯಿ ವಿಜಯನ್
ಪಿಣರಾಯಿ ವಿಜಯನ್ | Photo: PTI
ಅಲಪ್ಪುಳ(ಕೇರಳ): ರಾಜ್ಯದಲ್ಲಿ ಬಿಜೆಪಿಯ ಕೋಮುವಾದಿ ರಾಜಕಾರಣ ಬೇರೂರಲು ಅವಕಾಶ ನೀಡುವುದಿಲ್ಲ ಮತ್ತು ಅದು ರಾಜ್ಯದಲ್ಲಿ ಒಂದೇ ಒಂದು ಲೋಕಸಭಾ ಸ್ಥಾನವನ್ನೂ ಗೆಲ್ಲದಂತೆ ನೋಡಿಕೊಳ್ಳುತ್ತೇವೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶನಿವಾರ ಹೇಳಿದರು.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು,ಸಂಘ ಪರಿವಾರವು ದೇಶಕ್ಕೆ ಮತ್ತು ಅದರ ಪ್ರಜೆಗಳಿಗೆ ಒಡ್ಡಿರುವ ಸವಾಲುಗಳನ್ನು ಎಡರಂಗವು ಯಶಸ್ವಿಯಾಗಿ ಎದುರಿಸಲಿದೆ ಮತ್ತು ಅದನ್ನು ಅಧಿಕಾರದಿಂದ ಕಿತ್ತೊಗೆಯುವ ನಿಟ್ಟಿನಲ್ಲಿ ಶ್ರಮಿಸಲಿದೆ ಎಂದರು.
‘ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ಉದ್ದೇಶದಿಂದ ನಾವು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇವೆ ಮತ್ತು ಅದಕ್ಕಾಗಿಯೇ ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರೋಧ ರಂಗದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದೇವೆ. ಒಂದು ವಿಷಯವನ್ನು ಸ್ಪಷ್ಟಪಡಿಸಲು ನಾವು ಬಯಸುತ್ತೇವೆ. ಈ ಸಲ ರಾಜ್ಯದ ಎಲ್ಲ ಇಪ್ಪತ್ತು ಕ್ಷೇತ್ರಗಳಲ್ಲಿ ಬಿಜೆಪಿ ಸೋಲುವುದು ಮಾತ್ರವಲ್ಲ, ಯಾವುದೇ ಕ್ಷೇತ್ರದಲ್ಲಿ ಎರಡನೇ ಸ್ಥಾನವನ್ನು ಗಳಿಸುವಲ್ಲಿಯೂ ವಿಫಲಗೊಳ್ಳಲಿದೆ ’ ಎಂದರು.
ಈ ಚುನಾವಣೆಯು ದೇಶದ ಭವಿಷ್ಯವನ್ನು ನಿರ್ಧರಿಸಲಿದೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವುದಕ್ಕೆ ಯಾವುದೇ ಅರ್ಥವಿಲ್ಲ ಎಂದು ಹೇಳಿದ ವಿಜಯನ್, ಕಳೆದ ಐದು ವರ್ಷಗಳಲ್ಲಿಯ ತಮ್ಮ ಅನುಭವದಿಂದ ಕಾಂಗ್ರೆಸ್ ಗೆ ಮತ ನೀಡುವುದು ಅರ್ಥಹೀನ ಎನ್ನುವುದನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ. ದೇಶದಲ್ಲಿ ಅಪಾಯಕಾರಿ ನೀತಿಗಳನ್ನು ಜಾರಿಗೊಳಿಸುತ್ತಿರುವ ಬಿಜೆಪಿಯನ್ನು ಬುಡಮೇಲುಗೊಳಿಸಲು ಎಡಪಕ್ಷಗಳು ಜನರಿಂದ ಮತಗಳನ್ನು ಕೋರುತ್ತಿವೆ ಎಂದರು.
ಕಾಂಗ್ರೆಸ್ ವಿರುದ್ಧ ದಾಳಿ ನಡೆಸಿದ ಅವರು,‘ಅದು ಬಿಜೆಪಿ ಏಳಿಗೆ ಹೊಂದಲು ಅವಕಾಶವನ್ನು ನೀಡಿತ್ತು,ಆದರೆ ಎಡರಂಗವು ಕೋಮುವಾದಿ ಫ್ಯಾಸಿಸ್ಟ್ಗಳ ವಿರುದ್ಧ ಹೋರಾಡಿದ ಇತಿಹಾಸವನ್ನು ಹೊಂದಿದೆ. ಕೆಲವೇ ಮತಗಳಿಗಾಗಿ ನಾವು ನಮ್ಮ ರಾಜಕಾರಣವನ್ನು ಬದಲಿಸುವುದಿಲ್ಲ’ ಎಂದು ಹೇಳಿದರು.