ಲೋಕಸಭಾ ಚುನಾವಣೆ: ಪಕ್ಷದ ಅಭ್ಯರ್ಥಿ ವಿರುದ್ಧವೇ ಕಣಕ್ಕಿಳಿಯುವುದಾಗಿ ಘೋಷಿಸಿದ ಬಿಜೆಪಿ ಶಾಸಕ
"ಬಿಜೆಪಿಯಲ್ಲೇ ಉಳಿದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ"
Photo : X/@MLA_Kurseong
ಕೋಲ್ಕತ್ತಾ: ಕುರ್ಸಿಯಾಂಗ್ ಕ್ಷೇತ್ರದ ಬಿಜೆಪಿ ಶಾಸಕ ಬಿಷ್ಣು ಪ್ರಸಾದ್ ಶರ್ಮಾ ಅವರು ಡಾರ್ಜಿಲಿಂಗ್ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ರಾಜು ಬಿಸ್ತಾ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಸೋಮವಾರ ಘೋಷಿಸಿದ್ದಾರೆ.
ಬಿಜೆಪಿಯಲ್ಲೇ ಉಳಿದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ, ಪಕ್ಷ ಬಯಸಿದರೆ ಯಾವುದೇ ರೀತಿಯ ಶಿಸ್ತು ಕ್ರಮವನ್ನು ತೆಗೆದುಕೊಳ್ಳಬಹುದು. ಪಕ್ಷದೊಂದಿಗಿನ ಸಂಬಂಧವನ್ನು ತಾನೇ ಕಡಿದುಕೊಳ್ಳುವ ಉದ್ದೇಶವನ್ನು ಹೊಂದಿಲ್ಲ ಶರ್ಮಾ ಅವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
"ರಾಜು ಬಿಸ್ತಾ ನಮ್ಮ ಅಭ್ಯರ್ಥಿಯಲ್ಲ. ನಮಗೆ ಹೊರಗಿನವರು ಬೇಡ. ಬಿಜೆಪಿಗೆ ಯಾವುದೇ 'ಭೂಮಿ ಪುತ್ರ' (ಮಣ್ಣಿನ ಮಗ) ಸಿಗದಿರುವುದು ದುರದೃಷ್ಟಕರ" ಎಂದು ಶರ್ಮಾ ಹೇಳಿದ್ದಾರೆ.
ಡಾರ್ಜಿಲಿಂಗ್ ಬೆಟ್ಟ ಪ್ರದೇಶದವರಲ್ಲದ ವ್ಯಕ್ತಿಯೊಬ್ಬರು ಬಿಜೆಪಿಯಿಂದ ನಾಮನಿರ್ದೇಶನಗೊಂಡಿರುವುದು ಇದು ನಾಲ್ಕನೇ ಬಾರಿ. ಅಂತಹ ಅಭ್ಯರ್ಥಿಗಳು ಜನರ ನೈಜ ಸಮಸ್ಯೆಗಳನ್ನು ಎತ್ತುವುದಿಲ್ಲ ಎಂದು ಅವರು ಹೇಳಿದರು.
ಗೂರ್ಖಾಲ್ಯಾಂಡ್ ಪ್ರತ್ಯೇಕ ರಾಜ್ಯ ಆಗಬೇಕೆಂಬ ಕೂಗಿಗೆ ದನಿಗೂಡಿಸುತ್ತಾ ಬಂದಿರುವ ಶರ್ಮಾ ಅವರು, ಸತತವಾಗಿ ಡಾರ್ಜಿಲಿಂಗ್ ಬೆಟ್ಟ ಪ್ರದೇಶದ ಜನರು ಬಿಜೆಪಿಗೆ ಬೆಂಬಲಿಸುತ್ತಾ ಬಂದಿದ್ದರೂ, ಈ ಪ್ರದೇಶದೊಂದಿಗೆ ಯಾವುದೇ ಸಂಬಂಧವಿಲ್ಲದ ಅಭ್ಯರ್ಥಿಗಳನ್ನು ಪಕ್ಷವು ಸತತವಾಗಿ ಆಯ್ಕೆ ಮಾಡುತ್ತಿದೆ, ಇದು ಇಲ್ಲಿನ ಜನರಿಗೆ ಮಾಡುವ ಅವಮಾನ ಎಂದು ಟೀಕಿಸಿದರು.