ರಾಜ್ಯಸಭೆಯಲ್ಲಿ 86ಕ್ಕೆ ಕುಸಿದ ಬಿಜೆಪಿ ಸದಸ್ಯ ಬಲ
ಹೊಸದಿಲ್ಲಿ: ರಾಜ್ಯಸಭೆಯಲ್ಲಿ ಬಿಜೆಪಿಯ ಭಾಗವಾಗಿದ್ದ ನಾಲ್ಕು ಮಂದಿ ನಾಮನಿರ್ದೇಶಿತ ಸದಸ್ಯರು ಶನಿವಾರ ನಿವೃತ್ತರಾಗುವ ಮೂಲಕ ಸಂಸತ್ತಿನ ಮೇಲ್ಮನೆಯಲ್ಲಿ ಬಿಜೆಪಿ ಸದಸ್ಯಬಲ 86ಕ್ಕೆ ಹಾಗೂ ಎನ್ ಡಿಎ ಸದಸ್ಯಬಲ 101ಕ್ಕೆ ಕುಸಿದಿದೆ. 19 ಸ್ಥಾನಗಳು ಖಾಲಿ ಇರುವುದರಿಂದ ರಾಜ್ಯಸಭೆಯ ಸದ್ಯದ ಸದಸ್ಯಬಲ 226.
ರಾಜ್ಯಸಭೆಯಲ್ಲಿ ಎನ್ ಡಿಎಗೆ ಬಹುಮತ ಇಲ್ಲದಿದ್ದರೂ, ಇತರ ಮಿತ್ರ ಪಕ್ಷಗಳ ಏಳು ಮಂದಿ ಸದಸ್ಯರ ಬೆಂಬಲದೊಂದಿಗೆ ಪ್ರಮುಖ ಮಸೂದೆಗಳಿಗೆ ಅನುಮೋದನೆ ಪಡೆಯುತ್ತಾ ಬಂದಿದೆ. ಇದರಲ್ಲಿ ಇಬ್ಬರು ಪಕ್ಷೇತರರು ಮತ್ತು ಮಿತ್ರಪಕ್ಷಗಳಾದ ಎಐಎಡಿಎಂಕೆ ಹಾಗೂ ವೈಎಸ್ಆರ್ ಸಿಪಿಯ ಸದಸ್ಯರು ಸೇರಿದ್ದಾರೆ. ಬಜೆಟ್ ಅಧಿವೇಶನದಲ್ಲಿ ಮಿತ್ರಪಕ್ಷಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಖಾಲಿ ಇರುವ ನಾಲ್ಕು ನಾಮನಿರ್ದೇಶನ ಸದಸ್ಯ ಸ್ಥಾನಗಳಿಗೆ ತಕ್ಷಣ ಭರ್ತಿ ಮಾಡುವುದು ಬಿಜೆಪಿಗೆ ಅನಿವಾರ್ಯವಾಗಿದೆ.
ರಾಜ್ಯಸಭೆಗೆ ನಾಮಕರಣಗೊಂಡಿದ್ದ ರಾಕೇಶ್ ಸಿನ್ಹಾ, ರಾಮ್ ಶಕಲ್, ಸೋನಲ್ ಮಾನ್ ಸಿಂಗ್ ಮತ್ತು ಮಹೇಶ್ ಜೇಠ್ಮಲಾನಿ ಅವರು ಶನಿವಾರ ನಿವೃತ್ತರಾದರು. ರಾಜ್ಯಸಭೆಗೆ ನಾಮಕರಣಗೊಂಡ ಬಳಿಕ ಅವರು ಅಧಿಕೃತವಾಗಿ ಬಿಜೆಪಿ ಜತೆ ಗುರುತಿಸಿಕೊಂಡಿದ್ದರು. ನಾಮನಿರ್ದೇಶಿತ ಸದಸ್ಯರಾಗಿ ಬಿಜೆಪಿ ಸೇರಿರುವ ಮತ್ತೊಬ್ಬ ಸದಸ್ಯರೆಂದರೆ ಗುಲಾಮ್ ಅಲಿ. ಅವರು 2028ರ ಸೆಪ್ಟೆಂಬರ್ನಲ್ಲಿ ನಿವೃತ್ತರಾಗಲಿದ್ದಾರೆ.
ರಾಷ್ಟ್ರಪತಿಗಳು 12 ಸದಸ್ಯರನ್ನು ಕೇಂದ್ರದ ಶಿಫಾರಸ್ಸಿನಂತೆ ರಾಜ್ಯಸಭೆಗೆ ನಾಮಕರಣ ಮಾಡುತ್ತಾರೆ. ಈ ಪೈಕಿ ಏಳು ಮಂದಿ ಅಧಿಕೃತವಾಗಿ ಬಿಜೆಪಿ ಜತೆ ಗುರುತಿಸಿಕೊಂಡಿಲ್ಲವಾದರೂ, ಪ್ರಮುಖ ಮಸೂದೆಗಳ ವಿಚಾರದಲ್ಲಿ ಅವರು ಆಡಳಿತ ಪಕ್ಷದ ಪರ ನಿಲುವು ತಾಳುತ್ತಾರೆ.
ಪ್ರಸ್ತುತ ಮೇಲ್ಮನೆಯಲ್ಲಿ 19 ಸ್ಥಾನಗಳು ಖಾಲಿ ಇದ್ದು, ಇದರಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ ನಾಲ್ಕು, ಅಸ್ಸಾಂ, ಬಿಹಾರ ಮತ್ತು ಮಹಾರಾಷ್ಟ್ರದಿಂದ ತಲಾ ಎರಡು, ಹರ್ಯಾಣ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತ್ರಿಪುರಾದಿಂದ ತಲಾ ಒಂದು ಸ್ಥಾನಗಳು ಖಾಲಿ ಇವೆ.