"ಬುಡಕಟ್ಟು ವ್ಯವಹಾರಗಳ ಖಾತೆಯನ್ನು ಮೇಲ್ಜಾತಿಯವರಿಗೆ ನೀಡಬೇಕು": ವಿವಾದದ ಬಳಿಕ ಹೇಳಿಕೆ ಹಿಂಪಡೆದ ಬಿಜೆಪಿ ಸಂಸದ ಸುರೇಶ್ ಗೋಪಿ

ಸುರೇಶ್ ಗೋಪಿ (PTI)
ಹೊಸದಿಲ್ಲಿ: ʼಮೇಲ್ಜಾತಿಯ ವ್ಯಕ್ತಿಯನ್ನು ಬುಡಕಟ್ಟು ವ್ಯವಹಾರಗಳ ಸಚಿವರನ್ನಾಗಿ ಮಾಡಬೇಕುʼ ಎಂಬ ತಮ್ಮ ಹೇಳಿಕೆ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಸುರೇಶ್ ಗೋಪಿ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ.
"ನನಗೆ ಒಳ್ಳೆಯ ಉದ್ದೇಶವಿತ್ತು. ಹಾಗೂ ನಾವು ಪ್ರಸ್ತುತ ವ್ಯವಸ್ಥೆಯಿಂದ ಹೊರಬರಬೇಕು ಎಂದು ಮಾತ್ರ ನಾನು ಹೇಳಿದ್ದೆ. ಆದರೆ ನನ್ನ ವಿವರಣೆ ಸರಿಯಾಗಿಲ್ಲ ಎಂದು ನೀವು ಭಾವಿಸಿದರೆ, ನಾನು ಅದನ್ನು ಹಿಂತೆಗೆದುಕೊಳ್ಳುತ್ತಿದ್ದೇನೆ. ಹೀಗೆಯೇ ಮುಂದುವರಿಯಲಿ." ಎಂದು ಅವರು ಹೇಳಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆ ಪ್ರಯುಕ್ತ ಪೂರ್ವ ದೆಹಲಿಯ ಮಯೂರ್ ವಿಹಾರ್ ಪ್ರದೇಶದಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ ಸುರೇಶ್ ಗೋಪಿ, ʼಬುಡಕಟ್ಟು ಜನಾಂಗದವರಲ್ಲದ ವ್ಯಕ್ತಿ ಬುಡಕಟ್ಟು ವ್ಯವಹಾರಗಳ ಸಚಿವರಾಗಲು ಸಾಧ್ಯವಿಲ್ಲ ಎಂಬುದು ನಮ್ಮ ದೇಶದ ಮತ್ತೊಂದು ಶಾಪʼ ಎಂದು ಹೇಳಿದ್ದರು.
"ಬುಡಕಟ್ಟು ಸಮುದಾಯದ ಸಬಲೀಕರಣಕ್ಕಾಗಿ ಮೇಲ್ಜಾತಿಯ ವ್ಯಕ್ತಿಯೊಬ್ಬರು ಬುಡಕಟ್ಟು ವ್ಯವಹಾರಗಳ ಸಚಿವರಾಗಬೇಕು ಎಂಬುದು ನನ್ನ ಆಸೆ ಮತ್ತು ಕನಸು. ಬುಡಕಟ್ಟು ವ್ಯವಹಾರಗಳ ಸಚಿವರಾಗಬೇಕಾದ ಬುಡಕಟ್ಟು ವ್ಯಕ್ತಿ ಇದ್ದರೆ, ಆ ವ್ಯಕ್ತಿಯನ್ನು ಮೇಲ್ಜಾತಿಯ ಸಮುದಾಯದ ಸಬಲೀಕರಣ ಸಚಿವರನ್ನಾಗಿ ಮಾಡಬೇಕು. ಈ ಬದಲಾವಣೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಗಬೇಕು." ಎಂದು ಅವರು ಈ ಹಿಂದೆ ಹೇಳಿದ್ದರು.
"ಒಬ್ಬ ಬ್ರಾಹ್ಮಣ ಅಥವಾ ನಾಯ್ಡು ಬುಡಕಟ್ಟು ಜನರ ವ್ಯವಹಾರಗಳನ್ನು ನೋಡಿಕೊಳ್ಳಲಿ, ದೊಡ್ಡ ಬದಲಾವಣೆ ಇರುತ್ತದೆ. ನಾನು ಮೋದಿ ಜಿ ಅವರಿಗೆ ಈ ವಿನಂತಿಯನ್ನು ಮಾಡಿದ್ದೇನೆ, 2016 ರಲ್ಲಿ ರಾಜ್ಯಸಭಾ ಸಂಸದರಾದಾಗಿನಿಂದ ಪ್ರಧಾನಿ ನರೇಂದ್ರ ಮೋದಿಯವರನ್ನು ಬುಡಕಟ್ಟು ವ್ಯವಹಾರಗಳ ಸಚಿವರನ್ನಾಗಿ ಮಾಡುವಂತೆ ಹಲವಾರು ಬಾರಿ ವಿನಂತಿಸಿದ್ದೇನೆ” ಎಂದು ಗೋಪಿ ಹೇಳಿದ್ದರು.
ಸುರೇಶ್ ಗೋಪಿ ಹೇಳಿಕೆಯನ್ನು ಕಮ್ಯುನಿಸ್ಟ್ ಪಾರ್ಟಿ ಇಂಡಿಯಾ (ಮಾರ್ಕ್ಸ್ವಾದಿ) ಸಂಸದ ಕೆ. ರಾಧಾಕೃಷ್ಣನ್ ಅವರು ಟೀಕಿಸಿದ್ದು, ಅವರ ಹೇಳಿಕೆಗಳು ಅವರ ಪ್ರಮಾಣವಚನವನ್ನು ಉಲ್ಲಂಘಿಸಿವೆ ಎಂದು ಹೇಳಿದ್ದಾರೆ.
"ಭಾರತೀಯ ಸಂವಿಧಾನವು ಎಲ್ಲಾ ಜನರಿಗೆ ಸಮಾನತೆಯನ್ನು ಖಚಿತಪಡಿಸುತ್ತದೆ. ಅವರು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಸಮಾನತೆಯ ವಿರುದ್ಧ ಮಾತನಾಡಿದರು. ಯಾರು ಮೇಲ್ಜಾತಿಯವರು ಎಂದು ಸುರೇಶ್ ಗೋಪಿ ನಿರ್ಧರಿಸಬಹುದೇ?" ಎಂದು ಅವರು ಪ್ರಶ್ನಿಸಿದ್ದಾರೆ.