ಭಯೋತ್ಪಾದಕ ಸಂಘಟನೆ ಬಿಕೆಐಯ ನಾಲ್ವರ ಬಂಧನ
ಶಿವಸೇನೆ ನಾಯಕರ ನಿವಾಸದ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಪ್ರಕರಣ
ಸಾಂದರ್ಭಿಕ ಚಿತ್ರ | PC : freepik.com
ಚಂಡಿಗಢ : ಇಬ್ಬರು ವಿದೇಶಿ ಮೂಲದ ವ್ಯಕ್ತಿಗಳಾದ ಹರ್ಜಿತ್ ಸಿಂಗ್ ಆಲಿಯಾಸ್ ಲಾಡ್ಡಿ ಹಾಗೂ ಸಬಿ ನಡೆಸುತ್ತಿದ್ದ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ಭಯೋತ್ಪಾದಕ ಸಂಘಟನೆಯ ನಾಲ್ವರು ಸದಸ್ಯರನ್ನು ಬಂಧಿಸುವ ಮೂಲಕ ಪಂಜಾಬ್ ಪೊಲೀಸ್ ನ ಬೇಹುಗಾರಿಕೆ ನಿಗ್ರಹ ದಳ ಹಾಗೂ ಲೂಧಿಯಾನ ಪೊಲೀಸರು ಶಿವಸೇನೆ ನಾಯಕರನ್ನು ಗುರಿಯಾಗಿರಿಸಿ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ ಪ್ರಕರಣವನ್ನು ಬೇಧಿಸಿದ್ದಾರೆ.
ಬಂಧಿತರನ್ನು ಲೂಧಿಯಾನದ ಬೂತ್ಗಢದ ನಿವಾಸಿ ಜಸ್ವಿಂದರ್ ಸಿಂಗ್ ಆಲಿಯಾಸ್ ಬಿಂದರ್, ನವಂಶಹರ್ ನ ನಿವಾಸಿಗಳಾದ ರವೀಂದ್ರ ಪಾಲ್ ಸಿಂಗ್ ಆಲಿಯಾಸ್ ರವಿ (38), ಮನೀಷ್ ಶಾಹಿದ್ ಆಲಿಯಾಸ್ ಸಂಜು (30) ಹಾಗೂ ಅನಿಲ್ ಕುಮಾರ್ ಆಲಿಯಾಸ್ ಹನಿ (27) ಎಂದು ಗುರುತಿಸಲಾಗಿದೆ ಎಂದು ಪಂಜಾಬ್ನ ಡಿಜಿಪಿ ಗೌರವ್ ಯಾದವ್ ಮಂಗಳವಾರ ತಿಳಿಸಿದ್ದಾರೆ.
ಪೊಲೀಸರ ತಂಡ ಆರೋಪಿಗಳಿಂದ ಕೃತ್ಯ ನಡೆಸಲು ಬಳಸಿದ ಎರಡು ಮೊಬೈಲ್ ಫೋನ್ ಹಾಗೂ ಟಿವಿಎಸ್ ರೈಡರ್ ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಂಡಿದೆ.
ಅಕ್ಟೋಬರ್ 16ರಂದು ಯೋಗೇಶ್ ಭಕ್ಷಿ ನಿವಾಸದ ಮೇಲೆ ನಡೆದ ದಾಳಿ, ನವೆಂಬರ್ 2ರಂದು ಲೂಧಿಯಾನದ ಮಾಡೆಲ್ ಟೌನ್ ಎಕ್ಸ್ ಟೆನ್ಶನ್ ನಲ್ಲಿರುವ ಹರ್ ಕಿರಿಟ್ ಸಿಂಗ್ ಖುರಾನಾ ಅವರ ನಿವಾಸದ ಮೇಲೆ ನಡೆದ ದಾಳಿ ಸೇರಿದಂತೆ ಶಿವಸೇನಾ ನಾಯಕರನ್ನು ಗುರಿಯಾಗಿರಿಸಿ ನಡೆದ ಪೆಟ್ರೋಲ್ ಬಾಂಬ್ ದಾಳಿಯನ್ನು ಈ ಕಾರ್ಯಾಚರಣೆ ಯಶಸ್ವಿಯಾಗಿ ಬೇಧಿಸಿದೆ ಎಂದು ಗೌರವ್ ಯಾದವ್ ಅವರು ‘ಎಕ್ಸ್’ನ ಹ್ಯಾಂಡಲ್ ನ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಅಪರಿಚಿತ ದುಷ್ಕರ್ಮಿಗಳು ಲೂಧಿಯಾನದ ಹೈಬೌವಾಲ್ನ ನ್ಯೂ ಚಂದೇರ್ ನಗರ್ನಲ್ಲಿರುವ ಶಿವಸೇನೆ ನಾಯಕ ಯೋಗೇಶ್ ಬಕ್ಷಿ ಅವರ ನಿವಾಸದ ಮೇಲೆ ಅಕ್ಟೋಬರ್ 16ರಂದು ರಾತ್ರಿ 9.40ಕ್ಕೆ ಪೆಟ್ರೋಲ್ ಬಾಂಬ್ ಎಸೆದಿದ್ದರು. ಹದಿನೈದು ದಿನಗಳ ಬಳಿಕ ಮಾಡೆಲ್ ಟೌನ್ ಎಕ್ಸ್ಟೆನ್ಶನ್ನಲ್ಲಿರುವ ಶಿವಸೇನಾ ನಾಯಕ ಹರ್ಕಿರೀಟ್ ಸಿಂಗ್ ಅವರ ನಿವಾಸದ ಮೇಲೆ ಇದೇ ರೀತಿಯ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದರು.