ವಾರಣಾಸಿ-ಬೆಂಗಳೂರು ವಿಮಾನಕ್ಕೆ ಬಾಂಬ್ ಬೆದರಿಕೆ: ಕೆನಡಾ ಪ್ರಜೆ ಬಂಧನ
ಸಾಂದರ್ಭಿಕ ಚಿತ್ರ | PC : freepik.com
ಲಕ್ನೊ: ಬೆಂಗಳೂರಿಗೆ ತೆರಳುತ್ತಿದ್ದ ಇಂಡಿಗೊ ವಿಮಾನದಲ್ಲಿದ್ದ ವಿದೇಶಿ ಪ್ರಜೆಯೋರ್ವ ತಾನು ಬಾಂಬ್ ಕೊಂಡೊಯ್ಯುತ್ತಿದ್ದೇನೆ ಎಂದು ಪ್ರತಿಪಾದಿಸಿದ ಬಳಿಕ ವಾರಣಾಸಿ ವಿಮಾನ ನಿಲ್ದಾಣದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಈ ಘಟನೆ ಶನಿವಾರ ರಾತ್ರಿ ಸಂಭವಿಸಿದೆ. ಬೆದರಿಕೆ ಒಡ್ಡಿದ ಪ್ರಯಾಣಿಕ, ಕೆನಡಾ ಪ್ರಜೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ವಿಮಾನವನ್ನು ಕೂಲಂಕಷ ಪರಿಶೀಲನೆಗೆ ‘ಐಸೋಲೇಶನ್ ಬೇ’ಗೆ ಕೊಂಡೊಯ್ಯಲಾಯಿತು. ಆದರೆ, ಯಾವುದೇ ಸ್ಫೋಟಕ ಸಾಮಗ್ರಿಗಳು ಪತ್ತೆಯಾಗಿಲ್ಲ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಪುನೀತ್ ಗುಪ್ತಾ ತಿಳಿಸಿದ್ದಾರೆ.
ಕೆನಡಾ ಪ್ರಯಾಣಿಕನ ಹೇಳಿಕೆಯ ನಂತರ ಇಂಡಿಗೊ ಸಿಬ್ಬಂದಿ ತಕ್ಷಣವೇ ಬೆದರಿಕೆಯ ಬಗ್ಗೆ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ)ಗೆ ಮಾಹಿತಿ ನೀಡಿದರು ಎಂದು ಗುಪ್ತಾ ತಿಳಿಸಿದ್ದಾರೆ.
ಭದ್ರತಾ ಏಜೆನ್ಸಿಗಳಿಂದ ಅನುಮತಿ ಪಡೆದ ಬಳಿಕ ವಿಮಾನ ರವಿವಾರ ಬೆಳಗ್ಗೆ ಬೆಂಗಳೂರಿಗೆ ತೆರಳಿತು. ಘಟನೆಯ ಕುರಿತು ವಿಸ್ತೃತ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.