ಬಾಂಬ್ ಬೆದರಿಕೆ: ಅಮೆರಿಕಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನ ವಾಪಸ್ ಮುಂಬೈಗೆ

ಸಾಂದರ್ಭಿಕ ಚಿತ್ರ | PC : PTI
ಮುಂಬೈ: ಸೋಮವಾರ ಮುಂಬೈನಿಂದ ನ್ಯೂಯಾರ್ಕ್ಗೆ ಹಾರುತ್ತಿದ್ದ ಏರ್ ಇಂಡಿಯಾ ವಿಮಾನ ಎಐ119 ಸಂಭಾವ್ಯ ಭದ್ರತಾ ಬೆದರಿಕೆಯ ಹಿನ್ನೆಲೆಯಲ್ಲಿ ಅರ್ಧದಲ್ಲೇ ವಾಪಸಾಗಿದೆ.
ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ, ಅಗತ್ಯ ಶಿಷ್ಟಾಚಾರಗಳನ್ನು ಪಾಲಿಸಿದ ವಿಮಾನವು ಬೆಳಗ್ಗೆ 10.25ಕ್ಕೆ ಮುಂಬೈ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು.
ಭದ್ರತಾ ಸಂಸ್ಥೆಗಳು ಈಗ ವಿಮಾನದ ಕಡ್ಡಾಯ ಭದ್ರತಾ ತಪಾಸಣೆಗಳನ್ನು ನಡೆಸಿದೆ ಮತ್ತು ವಿಮಾನಯಾನ ಸಂಸ್ಥೆಯು ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಿದೆ ಎಂದು ಏರ್ ಇಂಡಿಯಾ ಹೇಳಿದೆ.
‘‘ಈ ವಿಮಾನದ ಹಾರಾಟವನ್ನು ಮಂಗಳವಾರ ಮುಂಜಾನೆ 5 ಗಂಟೆಗೆ ಮರು ನಿಗದಿಪಡಿಸಲಾಗಿದೆ. ಎಲ್ಲಾ ಪ್ರಯಾಣಿಕರಿಗೂ ಹೊಟೇಲ್ಗಳಲ್ಲಿ ವಾಸ್ತವ್ಯವನ್ನು ಕಲ್ಪಿಸಲಾಗಿದೆ. ಮುಂದಿನ ಪ್ರಯಾಣದವರೆಗೆ ಅವರಿಗೆ ಆಹಾರ ಮತ್ತು ಇತರ ಎಲ್ಲಾ ನೆರವನ್ನು ಒದಗಿಸಲಾಗುತ್ತಿದೆ’’ ಎಂದು ಏರ್ ಇಂಡಿಯಾ ಹೇಳಿಕೆಯೊಂದರಲ್ಲಿ ತಿಳಿಸಿದೆ.
ವಿಮಾನವು ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನ್ಯೂಯಾರ್ಕ್ನ ಜಾನ್ ಎಫ್. ಕೆನಡಿ ವಿಮಾನ ನಿಲ್ದಾಣಕ್ಕೆ ಹೋಗಬೇಕಾಗಿತ್ತು. 303 ಪ್ರಯಾಣಿಕರು ಮತ್ತು 19 ಸಿಬ್ಬಂದಿಯನ್ನು ಹೊತ್ತ ಬೋಯಿಂಗ್ 777 ವಿಮಾನವು ಅಝರ್ಬೈಜಾನ್ ಆಕಾಶದಲ್ಲಿ ತನ್ನ ಪಥವನ್ನು ಬದಲಿಸಿ ಮುಂಬೈಗೆ ಹಿಂದಿರುಗಿತು. ಭೂಸ್ಪರ್ಶದ ಬಳಿಕ, ಬಾಂಬ್ ತಪಾಸಣಾ ಪ್ರಕ್ರಿಯೆಯನ್ನು ಆರಂಭಿಸಲಾಯಿತು. ಆದರೆ ಬಾಂಬ್ ಬೆದರಿಕೆ ಕರೆ ಸುಳ್ಳೆಂದು ಸಾಬೀತಾಯಿತು.