ತಿರುವನಂತಪುರ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ
Photo Credit: PTI
ತಿರುವನಂತಪುರ: ತಿರುವನಂತಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ರವಿವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆಯನ್ನು ಸ್ವೀಕರಿಸಿದ್ದು ವ್ಯಾಪಕ ತಪಾಸಣೆಯನ್ನು ಕೈಗೊಳ್ಳಲಾಗಿತ್ತು. ಬಾಂಬ್ ನಿಷ್ಕ್ರಿಯ ದಳಗಳನ್ನು ನಿಯೋಜಿಸಲಾಗಿದ್ದು, ಎಲ್ಲ ಟರ್ಮಿನಲ್ ಗಳಲ್ಲಿ ಸಮಗ್ರ ಪರಿಶೀಲನೆ ನಡೆಸಲಾಗಿತ್ತು.
ಯಾವುದೇ ಶಂಕಾಸ್ಪದ ವಸ್ತು ಪತ್ತೆಯಾಗಿಲ್ಲ ಮತ್ತು ಇದು ಹುಸಿ ಬೆದರಿಕೆಯಾಗಿತ್ತು ಎಂದು ಅಧಿಕಾರಿಗಳು ದೃಢಪಡಿಸಿದರು. ಇಮೇಲ್ ಸಂದೇಶದ ಮೂಲವನ್ನು ಪತ್ತೆ ಹಚ್ಚಲು ಪೋಲಿಸರು ತನಿಖೆ ನಡೆಸುತ್ತಿದ್ದಾರೆ.
ಶನಿವಾರವಷ್ಟೇ ತಿರುವನಂತಪುರದ ಹಲವಾರು ಹೋಟೆಲ್ ಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿದ್ದವು. ಮಾಹಿತಿ ತಿಳಿದ ತಕ್ಷಣ ಬಾಂಬ್ ಬೆದರಿಕೆಗಳನ್ನು ಸ್ವೀಕರಿಸಿದ್ದ ಎಲ್ಲ ಹೋಟೆಲ್ ಗಳಿಗೆ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳಗಳೊಂದಿಗೆ ಧಾವಿಸಿ ತಪಾಸಣೆ ನಡೆಸಿದ ಪೋಲಿಸರು ಅವೆಲ್ಲ ಹುಸಿ ಬೆದರಿಕೆಗಳಾಗಿದ್ದವು ಎನ್ನುವುದನ್ನು ಖಚಿತ ಪಡಿಸಿಕೊಂಡಿದ್ದರು.
ಇತ್ತೀಚಿನ ತಿಂಗಳುಗಳಲ್ಲಿ ಕೇರಳದಾತ್ಯಂತ ವಿವಿಧ ಜಿಲ್ಲಾಧಿಕಾರಿಗಳ ಕಚೇರಿಗಳು,ಕಂದಾಯ ವಿಭಾಗಾಧಿಕಾರಿಗಳ ಕಚೇರಿಗಳಿಗೆ ಇಂತಹುದೇ ಬಾಂಬ್ ಬೆದರಿಕೆಗಳು ಬಂದಿದ್ದವು. ತೀರ ಇತ್ತೀಚಿಗೆ ಎ.22ರಂದು ಕೇರಳ ಉಚ್ಚ ನ್ಯಾಯಾಲಯಕ್ಕೂ ಇಂತಹ ಬೆದರಿಕೆ ಎದುರಾಗಿತ್ತು.
ಪೋಲಿಸರಿಂದ ಸಮಗ್ರ ತಪಾಸಣೆಗಳ ಬಳಿಕ ಇವೆಲ್ಲ ಹುಸಿ ಬೆದರಿಕೆ ಕರೆಗಳು ಎನ್ನುವುದು ದೃಢಪಟ್ಟಿತ್ತು.