ದಿಲ್ಲಿ, ನೊಯ್ಡಾದ ಎಂಟು ಶಾಲೆಗಳಿಗೆ ಬಾಂಬ್ ಬೆದರಿಕೆ; ಮಕ್ಕಳನ್ನು ತಕ್ಷಣ ಮನೆಗೆ ಕಳುಹಿಸಿದ ಶಾಲಾಡಳಿತಗಳು
ಶೋಧ ಕಾರ್ಯಾಚರಣೆ ಮುಂದುವರಿಕೆ
PC : PTI
ಹೊಸದಿಲ್ಲಿ: ದಿಲ್ಲಿ ಮತ್ತು ನೊಯ್ಡಾದ ಕನಿಷ್ಠ ಎಂಟು ಶಾಲೆಗಳಿಗೆ ಇಮೇಲ್ ಮೂಲಕ ಇಂದು ಬಾಂಬ್ ಬೆದರಿಕೆಗಳು ಬಂದ ಹಿನ್ನೆಲೆಯಲ್ಲಿ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ ಹಾಗೂ ಇಂದು ಒಂದು ಶಾಲೆಯಲ್ಲಿ ನಡೆಯಬೇಕಿರುವ ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿದೆ. ಪೊಲೀಸರು ಸ್ಥಳದಲ್ಲಿದ್ದು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಚಾಣಕ್ಯಪುರಿಯಲ್ಲಿರುವ ಸಂಸ್ಕೃತಿ ಸ್ಕೂಲ್, ಮಯೂರ್ ವಿಹಾರ್ ಪ್ರದೇಶದ ಮದರ್ ಮೇರಿ ಸ್ಕೂಲ್, ದ್ವಾರಕಾದಲ್ಲಿರುವ ಡೆಲ್ಲಿ ಪಬ್ಲಿಕ್ ಸ್ಕೂಲ್ಗೆ ಇಂದು ಮುಂಜಾನೆ ಬಾಂಬೆ ಬೆದರಿಕೆ ಬಂದಿತ್ತು. ನಂತರ ಐದು ಇತರ ಶಾಲೆಗಳಿಗೂ ಇಂತಹುದೇ ಬೆದರಿಕೆಯ ಇಮೇಲ್ಗಳು ಬಂದಿದ್ದವು ಹಾಗೂ ಕ್ಯಾಂಪಸ್ನಲ್ಲಿ ಸ್ಫೋಟಕಗಳಿವೆ ಎಂದು ಇಮೇಲ್ನಲ್ಲಿ ತಿಳಿಸಲಾಗಿತ್ತು.
ಮದರ್ ಮೇರಿ ಶಾಲೆಯಲ್ಲಿ ನಡೆಯುತ್ತಿದ್ದ ಪರೀಕ್ಷೆಯನ್ನು ಸ್ಥಗಿತಗೊಳಿಸಿ ತಕ್ಷಣ ಎಲ್ಲಾ ವಿದ್ಯಾರ್ಥಿಗಳನ್ನು ಹೊರ ಕಳುಹಿಸಲಾಯಿತು. ಹೆತ್ತವರು ಶಾಲೆಗಳಿಗೆ ದೌಡಾಯಿಸಿ ತಮ್ಮ ಮಕ್ಕಳನ್ನು ಕರೆದೊಯ್ಯುತ್ತಿರುವುದು ಹಲವೆಡೆ ಕಾಣಿಸಿದೆ.
ಬಾಂಬ್ ಪತ್ತೆ ದಳ, ಬಾಂಬ್ ನಿಷ್ಕ್ರಿಯ ದಳ ಮತ್ತು ದಿಲ್ಲಿ ಅಗ್ನಿಶಾಮಕ ವಾಹನಗಳು ಶಾಲೆಗಳಿಗೆ ಧಾವಿಸಿವೆ.
ಯಾವುದೇ ಶಾಲೆಯಲ್ಲಿ ಇನ್ನೂ ಯಾವುದೇ ಸಂದೇಹಾಸ್ಪದ ವಸ್ತು ಪತ್ತೆಯಾಗಿಲ್ಲ. ಬೆದರಿಕೆಯ ಇಮೇಲ್ ಎಲ್ಲಿಂದ ಬಂದಿದೆ ಯಾವ ಐಪಿ ವಿಳಾಸದಿಂದ ಬಂದಿದೆ ಎಂದು ತಿಳಿಯುವ ಯತ್ನ ನಡೆಸಲಾಗುತ್ತಿದೆ. ಸೈಬರ್ ಸೆಲ್ ಘಟಕ ಈ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೆಬ್ರವರಿಯಲ್ಲಿ ಆರ್ ಕೆ ಪುರಂನ ಡೆಲ್ಲಿ ಪಬ್ಲಿಕ್ ಸ್ಕೂಲ್ಗೆ ಇಂತಹುದೇ ಬೆದರಿಕೆ ಬಂದಿತ್ತಾದರೂ ನಂತರ ಇದೊಂದು ಸುಳ್ಳು ಬೆದರಿಕೆ ಎಂದು ತಿಳಿದುಬಂದಿತ್ತು.