ನಕಲಿ ಸುದ್ದಿ ಕುರಿತ ಐಟಿ ಕಾಯ್ದೆ ತಿದ್ದುಪಡಿ ಅಸಂವಿಧಾನಿಕ : ಬಾಂಬೆ ಹೈಕೋರ್ಟ್
PC : PTI
ಮುಂಬೈ : ನಕಲಿ ಸುದ್ದಿಗಳಿಗೆ ಸಂಬಂಧಿಸಿ ಮಾಹಿತಿ ತಂತ್ರಜ್ಞಾನ ಕಾನೂನುಗಳಿಗೆ ತರಲಾದ ತಿದ್ದುಪಡಿಯೊಂದನ್ನು ಬಾಂಬೆ ಹೈಕೋರ್ಟ್ ಗುರುವಾರ ರದ್ದುಪಡಿಸಿದೆ.
ಸರಕಾರವನ್ನು ಗುರಿಯಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುವ ನಕಲಿ ಹಾಗೂ ಸುಳ್ಳು ಸುದ್ದಿಗಳನ್ನು ಗುರುತಿಸುವ ಹಾಗೂ ನಿಯಂತ್ರಿಸುವ ಉದ್ದೇಶದಿಂದ ಈ ಕಾನೂನುಗಳನ್ನು ರೂಪಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಕಾನೂನುಗಳಿಗೆ 2023ರಲ್ಲಿ ತರಲಾದ ತಿದ್ದುಪಡಿಗಳು ಅಸಂವಿಧಾನಿಕವೆಂದು ನ್ಯಾಯಾಲಯವು ತೀರ್ಪಿನಲ್ಲಿ ತಿಳಿಸಿದೆ. ಸೆಪ್ಟೆಂಬರ್ 20ರಂದು ನ್ಯಾಯಮೂರ್ತಿ ಎ.ಎಸ್.ಚಂದ್ರಶೇಖರ್ ಅವರನ್ನೊಳಗೊಂಡ ಏಕ ಸದಸ್ಯ ನ್ಯಾಯಪೀಠವು ಸರಕಾರ ತಿದ್ದುಪಡಿಗೊಳಿಸಿರುವ ಐಟಿ ಕಾನೂನು ತುಂಬಾ ಅಸ್ಪಷ್ಟವಾಗಿದೆಯೆಂದು ಅಭಿಪ್ರಾಯಿಸಿತು.
ಐಟ ಕಾಯ್ದೆಗೆ ಮಾಡಲಾದ ಈ ತಿದ್ದುಪಡಿಯು ವ್ಯಕ್ತಿಗೆ ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದ ಮೇಲೂ ದುಷ್ಪರಿಣಾಮಮವನ್ನು ಉಂಟು ಮಾಡುವುದೆಂದು ನ್ಯಾಯಾಲಯ ಅಭಿಪ್ರಾಯಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ದ್ವಿಸದಸ್ಯ ವಿಭಾಗೀಯ ನ್ಯಾಯಪೀಠವು ವಿಭಜಿತ ತೀರ್ಪನ್ನು ನೀಡಿದ ಬಳಿಕ ನ್ಯಾಯಮೂರ್ತಿ ಚಂದೂರ್ಕರ್ ಅವರು ತೃತೀಯ ನ್ಯಾಯಾಧೀಶರಾಗಿ ಆಲಿಕೆಯನ್ನು ನಡೆಸಿದ್ದರು.
ನ್ಯಾಯಮೂರ್ತಿಗಳಾದ ಎ.ಎಸ್.ಗಡ್ಕರಿ ಹಾಗೂ ನೀಲಾ ಗೋಖಲೆ ಅವರನ್ನೊಳಗೊಂಡ ವಿಭಾಗೀಯ ಪೀಠವು ಗುರುವಾರ ಔಪಚಾರಿಕವಾಗಿ ತೀರ್ಪನ್ನು ಪ್ರಕಟಿಸಿತ್ತು. ನ್ಯಾಯಮೂರ್ತಿ ಚಂದೂರ್ಕರ್ ಅವರು ಟೈಬ್ರೇಕರ್ ನ್ಯಾಯಾಧೀಶರಾಗಿ ಪಾಲ್ಗೊಂಡಿದ್ದು. ನ್ಯಾಯಪೀಠದ ಬಹುಮತದ ಅಭಿಪ್ರಾಯವನ್ನು ಪರಿಗಣನೆಗೆ ತೆಗೆದುಕೊಂಡು, ಐಟಿ ಕಾಯ್ದೆಯ ಕಾನೂನು 3 (1) ಅನ್ನು ಅಸಂವಿಧಾನಿಕವೆಂದು ಘೋಷಿಸಲಾಗಿದ್ದು, ಅದನ್ನು ರದ್ದುಪಡಿಸಲಾಗಿದೆ. ಈ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಬಹುದಾಗಿದೆಯೆಂದು ನ್ಯಾಯಾಲಯ ತಿಳಿಸಿತು.
ನೂತನ ಐಟಿ ಕಾನೂನುಗಳನ್ನು ಭಾರತೀಯ ಎಡಿಟರ್ಸ್ ಗಿಲ್ಡ್, ಸುದ್ದಿ ಪ್ರಸಾರ ಹಾಗೂ ಡಿಜಿಟಲ್ ಸಂಘ ಹಾಗೂ ಭಾರತೀಯ ಮ್ಯಾಗಝೀನ್ಗಳ ಸಂಘ ಹಾಗೂ ಸ್ಟಾಂಡ್ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಅರ್ಜಿಯನ್ನು ಸಲ್ಲಿಸಿದ್ಜರು.
ಕಳೆದ ಜನವರಿಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್(ಈಗ ನಿವೃತ್ತ) ಹಾಗೂ ನೀಲಾ ಗೋಖಲೆ ವಿಭಜಿತ ತೀರ್ಪುಗಳನ್ನು ನೀಡಿದ್ದರು. ಐಟ ಕಾನೂನುಗಳಿಗೆ ಮಾಡಲಾದ ತಿದ್ದುಪಡಿಯು ಸೆನ್ಸಾರ್ಶಿಪ್ ಅನ್ನು ಒಳಗೊಂಡಿದೆ ಎಂದು ನ್ಯಾಯಮೂರ್ತಿ ಪಟೇಲ್ ಅಭಿಪ್ರಾಯಿಸಿದರೆ, ಆದರೆ ನ್ಯಾಯಮೂರ್ತಿ ಗೋಖಲೆ ಅವರು ಮುಕ್ತ ವಾಕ್ ಸ್ವಾತಂತ್ರ್ಯದ ಮೇಲೆ ನೂತನ ತಿದ್ದುಪಡಿ ಪರಿಣಾಮ ಬೀರುವುದಿಲ್ಲವೆಂದು ಹೇಳಿದ್ದಾರೆ.
ಆನ್ಲೈನ್ನಲ್ಲಿ ಪ್ರಸಾರವಾಗುವ ವಿಷಯಗಳನ್ನು ಸತ್ಯಾಸತ್ಯತೆಯ ತಪಾಸಣೆಯನ್ನು ನಡೆಸುವ ಉದ್ದೇಶದಿಂದ ರಚಿಸಲಾದ ಫ್ಯಾಕ್ಟ್ ಚೆಕಿಂಗ್ ಘಟಕವು ಸರಕಾರವನ್ನು ತಪ್ಪುದಾರಿಗೆಳೆಯುವ ಅಥವಾ ಸುಳ್ಲು ಮಾಹಿತಿಗಳನ್ನು ನೀಡುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದ್ದಾರೆ.