ಸೊಸೆಗೆ ಟಿವಿ ವೀಕ್ಷಣೆಗೆ, ಒಂಟಿಯಾಗಿ ದೇವಳಕ್ಕೆ ಹೋಗಲು ಅವಕಾಶ ನೀಡದಿರುವುದು, ಚಾಪೆಯಲ್ಲಿ ಮಲಗಿಸುವುದು ಕ್ರೌರ್ಯವಲ್ಲ: ಬಾಂಬೆ ಹೈಕೋರ್ಟ್
ಬಾಂಬೆ ಹೈಕೋರ್ಟ್ | PC : PTI
ಮುಂಬೈ: ಮೃತ ಪತ್ನಿಯ ಮೇಲಿನ ಕ್ರೌರ್ಯಕ್ಕಾಗಿ ಪತಿ ಹಾಗೂ ಆತನ ಕುಟುಂಬವನ್ನು ಅಪರಾಧಿಗಳೆಂದು ಘೋಷಿಸಿದ್ದ ಮಹಾರಾಷ್ಟ್ರದ ಜಳಗಾಂವ್ ಜಿಲ್ಲೆಯ ವಿಚಾರಣಾ ನ್ಯಾಯಾಲಯದ 20 ವರ್ಷಗಳ ಹಿಂದಿನ ಆದೇಶವನ್ನು ಬಾಂಬೆ ಉಚ್ಚ ನ್ಯಾಯಾಲಯದ ಔರಂಗಾಬಾದ್ ಪೀಠವು ರದ್ದುಗೊಳಿಸಿದೆ. ಮೃತ ಮಹಿಳೆಯನ್ನು ನಿಂದಿಸಿದ್ದ, ಟಿವಿ ವೀಕ್ಷಣೆಗೆ ಮತ್ತು ದೇವಸ್ಥಾನಕ್ಕೆ ಒಂಟಿಯಾಗಲು ಹೋಗಲು ಅವಕಾಶ ನೀಡದಿದ್ದ ಮತ್ತು ಆಕೆಯನ್ನು ಚಾಪೆಯ ಮೇಲೆ ಮಲಗುವಂತೆ ಮಾಡಿದ್ದ ಆರೋಪಗಳು ಗಂಭೀರ ಸ್ವರೂಪದ್ದಾಗಿರಲಿಲ್ಲ, ಹೀಗಾಗಿ ಐಪಿಸಿಯ ಕಲಂ 498 ಎ ಅಡಿ ಇವು ಕ್ರೌರ್ಯದ ಅಪರಾಧವಾಗುವುದಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.
ಆರೋಪಗಳು ಆರೋಪಿಯ ಗೃಹ ವ್ಯವಹಾರಗಳಿಗೆ ಸಂಬಂಧಿಸಿವೆ, ಹೀಗಾಗಿ ಆರೋಪಗಳ ಸ್ವರೂಪವು ದೈಹಿಕ ಮತ್ತು ಮಾನಸಿಕ ಕ್ರೌರ್ಯವನ್ನು ಒಳಗೊಂಡಿರಲಿಲ್ಲ ಎಂದು ಹೇಳಿದ ನ್ಯಾಯಾಲಯವು, ಐಪಿಸಿಯ ಕಲಂ 498 ಎ ಮತ್ತು 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿ ದೋಷ ನಿರ್ಣಯಕ್ಕೊಳಗಾಗಿದ್ದ ಆರೋಪಿ,ಆತನ ಹೆತ್ತವರು ಮತ್ತು ಸೋದರನನ್ನು ಖುಲಾಸೆಗೊಳಿಸಿತು. ಆರೋಪಿಗಳು ವಿಚಾರಣಾ ನ್ಯಾಯಾಲಯದ ತೀರ್ಪಿನ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದರು.
ಆರೋಪಿಯು 2002,ಡಿ.24ರಂದು ಮದುವೆಯಾಗಿದ್ದು,ಆತನ ಪತ್ನಿ 2003,ಮೇ 1ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಗಂಡನ ಮನೆಯವರ ದೈಹಿಕ ಮತ್ತು ಮಾನಸಿಕ ಕಿರುಕುಳ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎಂದು ಆಕೆಯ ಪೋಷಕರು ಆರೋಪಿಸಿದ್ದರು.