ಅಪ್ರಾಪ್ತ ವಯಸ್ಕ ಪತ್ನಿಯೊಂದಿಗೆ ಒಪ್ಪಿಗೆಯ ಲೈಂಗಿಕ ಕ್ರಿಯೆ ಅತ್ಯಾಚಾರ: ಬಾಂಬೆ ಹೈಕೋರ್ಟ್
ಬಾಂಬೆ ಹೈಕೋರ್ಟ್ | PC : thehindu.com
ಮುಂಬೈ: ಅಪ್ರಾಪ್ತ ವಯಸ್ಸಿನ ಪತ್ನಿಯ ಸಮ್ಮತಿಯ ಮೇರೆಗೆ ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದು ಅತ್ಯಾಚಾರವಾಗುತ್ತದೆ ಮತ್ತು ಇಂತಹ ಕೃತ್ಯವನ್ನು ಕಾನೂನಿನಡಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿರುವ ಬಾಂಬೆ ಉಚ್ಚ ನ್ಯಾಯಾಲಯದ ನಾಗ್ಪುರ ಪೀಠವು, ವ್ಯಕ್ತಿಯೋರ್ವನಿಗೆ ವಿಧಿಸಲಾದ 10 ವರ್ಷಗಳ ಜೈಲು ಶಿಕ್ಷೆಯನ್ನು ಎತ್ತಿ ಹಿಡಿದಿದೆ. ವ್ಯಕ್ತಿಯ ಪತ್ನಿ ಆತನ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದಳು.
ಲೈಂಗಿಕ ಸಂಬಂಧಕ್ಕೆ ಒಪ್ಪಿಗೆಗೆ ವಯಸ್ಸು 18 ವರ್ಷಕ್ಕಿಂತ ಹೆಚ್ಚಿರಬೇಕು ಎಂದು ಹೇಳಿದ ನ್ಯಾ.ಜಿ.ಎ.ಸನಪ್ ಅವರ ಪೀಠವು,ಮದುವೆಯಾಗಿರಲಿ ಅಥವಾ ಇಲ್ಲದಿರಲಿ,18 ವರ್ಷಕ್ಕಿಂತ ಕಡಿಮೆ ಪ್ರಾಯದ ಬಾಲಕಿಯೊಂದಿಗೆ ಲೈಂಗಿಕ ಕ್ರಿಯೆಯು ಅತ್ಯಾಚಾರವಾಗುತ್ತದೆ ಎಂದು ಸ್ಪಷ್ಟಪಡಿಸಿತು.
ಕೆಳ ನ್ಯಾಯಾಲಯವು ಆರೋಪಿಗೆ ವಿಧಿಸಿದ್ದ 10 ವರ್ಷಗಳ ಕಠಿಣ ಶಿಕ್ಷೆಯನ್ನು ಪೀಠವು ಎತ್ತಿ ಹಿಡಿಯಿತು.
ಪ್ರಕರಣದ ವಿವರಗಳ ಪ್ರಕಾರ, ವ್ಯಕ್ತಿಯು ದೂರುದಾರ ಮಹಿಳೆಯೊಂದಿಗೆ ಬಲವಂತದ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದ, ಪರಿಣಾಮವಾಗಿ ಆಕೆ ಗರ್ಭಿಣಿಯಾಗಿದ್ದಳು. ನಂತರ ವ್ಯಕ್ತಿಯು ಆಕೆಯನ್ನು ಮದುವೆಯಾಗಿದ್ದ, ಆದರೆ ಅವರ ವೈವಾಹಿಕ ಸಂಬಂಧ ಹದಗೆಟ್ಟಿದ್ದು, ಮಹಿಳೆ ಪತಿಯ ವಿರುದ್ಧ ದೂರು ದಾಖಲಿಸಿದ್ದಳು.
ವಾದಕ್ಕಾಗಿ, ಅವರಿಬ್ಬರ ನಡುವೆ ಮದುವೆ ನಡೆದಿತ್ತು ಎಂದಿಟ್ಟುಕೊಂಡರೂ, ತನ್ನ ಒಪ್ಪಿಗೆಯಿಲ್ಲದೆ ತನ್ನೊಂದಿಗೆ ಲೈಂಗಿಕ ಕ್ರಿಯೆಯನ್ನು ನಡೆಸಲಾಗಿತ್ತು ಎಂಬ ಸಂತ್ರಸ್ತೆಯ ಆರೋಪಗಳ ಹಿನ್ನೆಲೆಯಲ್ಲಿ ಅದು ಅತ್ಯಾಚಾರವಾಗುತ್ತದೆ ಎಂದು ಉಚ್ಚ ನ್ಯಾಯಾಲಯವು ಹೇಳಿತು.
ಸಂತ್ರಸ್ತೆ ಮಹಾರಾಷ್ಟ್ರದ ವಾರ್ಧಾ ನಿವಾಸಿಯಾಗಿದ್ದಾಗ, ಆರೋಪಿ ಆಕೆಯ ನೆರೆಕರೆಯವನಾಗಿದ್ದ. 2019ರಲ್ಲಿ ಸಂತ್ರಸ್ತೆ ದೂರು ಸಲ್ಲಿಸುವ ಮುನ್ನ 3-4 ವರ್ಷಗಳ ಕಾಲ ಅವರಿಬ್ಬರೂ ಪ್ರಣಯ ಸಂಬಂಧವನ್ನು ಹೊಂದಿದ್ದರು. ಆದರೆ ದೈಹಿಕ ಸಂಪರ್ಕ ಹೊಂದಲು ಆರೋಪಿಯ ಪ್ರಯತ್ನಗಳನ್ನು ಸಂತ್ರಸ್ತೆ ತಿರಸ್ಕರಿಸಿದ್ದಳು.
ಆರ್ಥಿಕ ಸಂಕಷ್ಟದಿಂದಾಗಿ ಸಂತ್ರಸ್ತೆ ಕೆಲಸಕ್ಕಾಗಿ ತನ್ನ ಕುಟುಂಬದೊಂದಿಗೆ ಸಮೀಪದ ಪಟ್ಟಣಕ್ಕೆ ಸ್ಥಳಾಂತರಗೊಂಡಿದ್ದಳು. ಆಕೆಯ ಹಿಂದೆಯೇ ತೆರಳಿದ್ದ ಆರೋಪಿ ಆಕೆಯನ್ನು ತನ್ನ ಬೈಕ್ನಲ್ಲಿ ಕೆಲಸದ ಸ್ಥಳಕ್ಕೆ ಕರೆದೊಯ್ಯುತ್ತಿದ್ದ ಮತ್ತು ವಾಪಸ್ ಕರೆತರುತ್ತಿದ್ದ. ಅಂತಿಮವಾಗಿ ಬಲವಂತದಿಂದ ಆಕೆಯೊಂದಿಗೆ ಲೈಂಗಿಕ ಸಂಪರ್ಕವನ್ನು ಹೊಂದಿದ್ದ, ಪರಿಣಾಮವಾಗಿ ಆಕೆ ಗರ್ಭಿಣಿಯಾಗಿದ್ದಳು.
ಆರಂಭದಲ್ಲಿ ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ ಆರೋಪಿ ಬಾಡಿಗೆಯ ಕೋಣೆಯಲ್ಲಿ ಕೆಲವು ನೆರೆಕರೆಯವರ ಉಪಸ್ಥಿತಿಯಲ್ಲಿ ‘ನಕಲಿ ಮದುವೆ’ ಸಮಾರಂಭವನ್ನು ನಡೆಸಿದ್ದ. ಆದರೆ ಬಳಿಕ ಆತನ ವರ್ತನೆ ಬದಲಾಗಿದ್ದು, ಸಂತ್ರಸ್ತೆಯನ್ನು ನಿಂದಿಸುತ್ತಿದ್ದ, ದೈಹಿಕ ಹಲ್ಲೆಯನ್ನು ನಡೆಸುತ್ತಿದ್ದ ಮತ್ತು ಗರ್ಭಪಾತಕ್ಕೆ ಒತ್ತಡ ಹೇರುತ್ತಿದ್ದ. ಸಂತ್ರಸ್ತೆಗೆ ಮಗು ಜನಿಸಿದ ಬಳಿಕ ಪಿತೃತ್ವವನ್ನು ನಿರಾಕರಿಸಿದ್ದ ಆರೋಪಿ,ಆಕೆ ಪರಪುರುಷನಿಂದ ಮಗುವನ್ನು ಪಡೆದಿದ್ದಾಳೆ ಎಂದು ಆರೋಪಿಸಿದ್ದ.
ಆರೋಪಿಯ ದೌರ್ಜನ್ಯ ಸಹಿಸಲಾಗದೆ ಸಂತ್ರಸ್ತೆ ಮೇ 2019ರಲ್ಲಿ ಆತನ ವಿರುದ್ಧ ಪೋಲಿಸ್ ದೂರನ್ನು ದಾಖಲಿಸಿದ್ದಳು ಮತ್ತು ಪೋಲಿಸರು ಆತನನ್ನು ಬಂಧಿಸಿದ್ದರು.
ಪ್ರತಿವಾದದ ಸಂದರ್ಭದಲ್ಲಿ ಆರೋಪಿಯು ಲೈಂಗಿಕ ಸಂಬಂಧವು ಸಮ್ಮತಿಯಿಂದ ಕೂಡಿತ್ತು ಮತ್ತು ಸಂತ್ರಸ್ತೆ ತನ್ನ ಪತ್ನಿಯಾಗಿದ್ದಾಳೆ ಎಂದು ಹೇಳಿಕೊಂಡಿದ್ದ. ಆದರೆ ಉಚ್ಚ ನ್ಯಾಯಾಲಯವು ಇದನ್ನು ಪುರಸ್ಕರಿಸಲಿಲ್ಲ.
ಆರೋಪಿ ಮತ್ತು ಸಂತ್ರಸ್ತೆ ತಮ್ಮ ನಡುವಿನ ಸಂಬಂಧದಿಂದ ಜನಿಸಿದ ಗಂಡುಮಗುವಿನ ಜೈವಿಕ ಹೆತ್ತವರಾಗಿದ್ದಾರೆ ಎನ್ನುವುದನ್ನು ದೃಢಪಡಿಸಿದ ಡಿಎನ್ಎ ವರದಿಯನ್ನು ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿತ್ತು.