ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲು ನಿಷೇಧವಿದೆಯೆ : ಬಾಂಬೆ ಹೈಕೋರ್ಟ್ ಪ್ರಶ್ನೆ
ಬಾಂಬೆ ಹೈಕೋರ್ಟ್ | PTI
ಮುಂಬೈ: 18ನೇ ಶತಮಾನದ ಮೈಸೂರು ದೊರೆ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲು ನಿಷೇಧವಿದೆಯೆ ಎಂದು ಗುರುವಾರ ಪ್ರಶ್ನಿಸಿದ ಬಾಂಬೆ ಹೈಕೋರ್ಟ್, ಟಿಪ್ಪು ಜಯಂತಿ ಸಮಾರೋಪದ ಅಂಗವಾಗಿ ಹಮ್ಮಿಕೊಂಡಿರುವ ರ್ಯಾಲಿಗೆ ಅನುಮತಿ ನೀಡುವ ಕುರಿತು ಶೀಘ್ರವೇ ನಿರ್ಧಾರ ಕೈಗೊಳ್ಳಬೇಕು ಎಂದು ಪುಣೆ ಗ್ರಾಮೀಣ ಪೊಲೀಸರಿಗೆ ಸೂಚಿಸಿದೆ.
ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂಬ ನೆಲೆಯಲ್ಲಿ ಯಾವುದೇ ರ್ಯಾಲಿಗೆ ಅನುಮತಿ ನಿರಾಕರಿಸಲು ಸಾಧ್ಯವಿಲ್ಲ ಎಂದೂ ನ್ಯಾಯಾಲಯ ಅಭಿಪ್ರಾಯ ಪಟ್ಟಿತು.
ಟಿಪ್ಪು ಸುಲ್ತಾನ್, ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಆಝಾದ್ ಜನ್ಮದಿನಾರಣೆಗಳು ಹಾಗೂ ಸಂವಿಧಾನ ದಿನದ ಸಮಾರೋಪದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ರ್ಯಾಲಿಗೆ ಅನುಮತಿ ನೀಡಬೇಕು ಎಂದು ಪೊಲೀಸರಿಗೆ ಸೂಚಿಸಬೇಕು ಎಂದು ಎಐಎಂಐಎಂ ಪಕ್ಷದ ಪುಣೆ ಘಟಕದ ಅಧ್ಯಕ್ಷ ಫಯಾಝ್ ಶೇಖ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾ. ರೇವತಿ ಮೋಹಿತೆ ಹಾಗೂ ನ್ಯಾ.ಶಿವಕುಮಾರ್ ಡಿಗೆ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ನಡೆಸಿತು.
ಅರ್ಜಿಯ ಪ್ರಕಾರ, ಟಿಪ್ಪು ಜಯಂತಿ ಸಮಾರೋಪದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ರ್ಯಾಲಿಗೆ ಅನುಮತಿ ನಿರಾಕರಿಸಿರುವ ಪುಣೆ ಗ್ರಾಮೀಣ ಪೊಲೀಸರು, ರ್ಯಾಲಿಯನ್ನು ನಿಮ್ಮ ಖಾಸಗಿ ಸ್ಥಳದಲ್ಲಿ ಹಮ್ಮಿಕೊಳ್ಳಿ, ಸಾರ್ವಜನಿಕ ಸ್ಥಳದಲ್ಲಲ್ಲ ಎಂದು ಸೂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.