ಮುಂಬೈ ವಾಯು ಮಾಲಿನ್ಯ ತಡೆಯಲು ಕ್ರಮಗಳಿಗೆ ಬಾಂಬೆ ಹೈಕೋರ್ಟ್ ಸಲಹೆ
ಸಾಂದರ್ಭಿಕ ಚಿತ್ರ | PTI
ಮುಂಬೈ : ಮುಂಬೈನಲ್ಲಿ ವಾಯು ಮಾಲಿನ್ಯವನ್ನು ತಡೆಯಲು ಬೇಕರಿಗಳಲ್ಲಿ ಕಟ್ಟಿಗೆ ಅಥವಾ ಕಲ್ಲಿದ್ದಲು ಭಟ್ಟಿಗಳ ಬಳಕೆಯನ್ನು ಮತ್ತು ಡೀಸೆಲ್ ವಾಹನಗಳನ್ನು ಕ್ರಮೇಣ ನಿಲ್ಲಿಸುವುದನ್ನು ಬಾಂಬೆ ಉಚ್ಛ ನ್ಯಾಯಾಲಯವು ಪ್ರಸ್ತಾವಿಸಿದೆ.
ಮುಂಬೈನಲ್ಲಿ ಹದಗೆಡುತ್ತಿರುವ ವಾಯು ಗುಣಮಟ್ಟ ಕಳವಳಗಳಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗುರುವಾರ ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಮುಖ್ಯ ನ್ಯಾಯಾಧೀಶ ಡಿ.ಕೆ.ಉಪಾಧ್ಯಾಯ ಮತ್ತು ಜಿ.ಎಸ್.ಕುಲಕರ್ಣಿ ಅವರ ಪೀಠವು ಡೀಸೆಲ್ ಚಾಲಿತ ವಾಹನಗಳ ಬದಲು ಸಿಎನ್ಜಿ ಮತ್ತು ವಿದ್ಯುತ್ ಚಾಲಿತ ವಾಹನಗಳನ್ನು ಬಳಸುವುದು ಮುಖ್ಯವಾಗಿದೆ. ದಿಲ್ಲಿಯ ನಕಲು ಮಾಡುವುದಲ್ಲ,ಆದರೆ ಕೇವಲ ಸಿಎನ್ಜಿ ಚಾಲಿತ ವಾಹನಗಳನ್ನು ಮಾತ್ರ ಅನುಮತಿಸುವುದನ್ನು ಮತ್ತು ಡೀಸೆಲ್ ಇಂಜಿನ್ಗಳನ್ನು ಹಂತ ಹಂತವಾಗಿ ನಿಲ್ಲಿಸುವುದನ್ನು ಪರಿಗಣಿಸಬಹುದು ಎಂದು ಹೇಳಿತು.
ಈ ವಿಷಯದಲ್ಲಿ ಅಮಿಕಸ್ ಕ್ಯೂರೆ ಆಗಿರುವ ವಕೀಲ ಡೇರಿಯಸ್ ಖಂಬಟ್ಟಾ ಅವರು,ಬೇಕರಿಗಳಲ್ಲಿ ಬಳಸಲಾಗುವ ಭಟ್ಟಿಗಳು ನಗರದಲ್ಲಿಯ ವಾಯು ಗುಣಮಟ್ಟ ಬಿಕ್ಕಟ್ಟಿನಲ್ಲಿ ಮೂರನೇ ಅತಿ ದೊಡ್ಡ ಪಾಲನ್ನು ಹೊಂದಿವೆ ಎಂದು ವಿಚಾರಣೆ ಸಂದರ್ಭದಲ್ಲಿ ತಿಳಿಸಿದರು. ನಿರ್ಮಾಣ ಸ್ಥಳಗಳು ಮತ್ತು 60 ಮತ್ತು ಅದಕ್ಕಿಂತ ಹೆಚ್ಚಿನ ಮಾಲಿನ್ಯ ಸೂಚ್ಯಂಕವನ್ನು ಹೊಂದಿರುವ ಕುಲುಮೆಗಳಂತಹ ಕೆಂಪು ವರ್ಗದಲ್ಲಿಯ ಕೈಗಾರಿಕೆಗಳು ವಾಯುಮಾಲಿನ್ಯದಲ್ಲಿ ಅತ್ಯಂತ ಹೆಚ್ಚಿನ ಪಾಲನ್ನು ಹೊಂದಿರುವ ಎರಡು ಕ್ಷೇತ್ರಗಳಾಗಿವೆ.
ನಿರ್ಮಾಣ ಸ್ಥಳಗಳ ವಿರುದ್ಧ ತಕ್ಷಣ ಕ್ರಮವನ್ನು ತೆಗೆದುಕೊಳ್ಳುವಂತೆ ಖಂಬಟ್ಟಾ ಆಗ್ರಹಿಸಿದರು.
ಈ ವೇಳೆ, ಬೇಕರಿಗಳಲ್ಲಿ ಬಳಕೆಯಾಗುವ ಭಟ್ಟಿಗಳಿಂದ ಮುಕ್ತವಾಗಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದ ನ್ಯಾಯಾಲಯವು,‘ಬೇಕರಿಗಳು ಮತ್ತು ಸಣ್ಣ ಆಹಾರ ತಯಾರಿಕೆ ಘಟಕಗಳು ಭಟ್ಟಿಗಳನ್ನು ಬಳಸುತ್ತಿವೆ. ಇವುಗಳಲ್ಲಿ ಬಳಕೆಯಾಗುವ ಇಂಧನದ ಬಗ್ಗೆ ನಮಗೆ ಖಚಿತವಿಲ್ಲ. ಮುಂಬೈನಲ್ಲಿ ವಾರ್ಷಿಕ ಐದು ಕೋಟಿಗೂ ಅಧಿಕ ಬನ್ಗಳು ತಯಾರಾಗುತ್ತಿವೆ. ಇದು ವಾಯುಮಾಲಿನ್ಯಕ್ಕೆ ಪ್ರಮುಖ ಮೂಲವಾಗಿರಬಹುದು’ ಎಂದು ಹೇಳಿತು.
ನಗರದಲ್ಲಿಯ ಎಲ್ಲ ಭಟ್ಟಿಗಳಲ್ಲಿ ಕಟ್ಟಿಗೆ ಅಥವಾ ಕಲ್ಲಿದ್ದಲು ಬಳಕೆಯನ್ನು ನಿಷೇಧಿಸಲು ಬೃಹನ್ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ)ಯು ಪ್ರಸ್ತಾವಿಸಬಹುದೇ? ಭಟ್ಟಿಗಳಿಗಾಗಿ ಯಾವುದೇ ಶಾಸನಬದ್ಧ ನಿಯಂತ್ರಣ ವ್ಯವಸ್ಥೆ ಲಭ್ಯವಿದೆಯೇ? ಭಟ್ಟಿಗಳು ಕಟ್ಟಿಗೆ ಮತ್ತು ಕಲ್ಲಿದ್ದಲು ಬಳಕೆಯನ್ನು ನಿಲ್ಲಿಸಿದರೆ ಮಾತ್ರ ಹೊಸ ಪರವಾನಿಗೆಗಳನ್ನು ನೀಡುವ ಷರತ್ತನ್ನು ನಾವು ವಿಧಿಸಬಹುದೇ?’ ಎಂದು ನ್ಯಾಯಾಲಯವು ಪ್ರಶ್ನಿಸಿತು.
ಈಗಲೂ ಕಟ್ಟಿಗೆ ಅಥವಾ ಕಲ್ಲಿದ್ದಲು ಭಟ್ಟಿಗಳನ್ನು ಬಳಸುತ್ತಿರುವ ಬೇಕರಿಗಳಿಗೆ ಪಾಲಿಕೆಯು ನೋಟಿಸ್ಗಳನ್ನು ಹೊರಡಿಸಿದೆ. ಒಂದು ವರ್ಷದೊಳಗೆ ಆಧುನಿಕ ಭಟ್ಟಿಗಳಿಗೆ ಬದಲಿಸಿಕೊಳ್ಳುವಂತೆ ಅವುಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಪಾಲಿಕೆ ಪರ ವಕೀಲ ಮಿಲಿಂದ ಸಾಠೆ ತಿಳಿಸಿದರು. ಕಳಪೆ ವಾಯು ಗುಣಮಟ್ಟದಿಂದಾಗಿ ಬೋರಿವಿಲಿ(ಪೂರ್ವ) ಮತ್ತು ಬೈಕಳಾಗಳಲ್ಲಿ ನಿರ್ಮಾಣ ಚಟುವಟಿಕೆಗಳನ್ನು ತಕ್ಷಣ ಸ್ಥಗಿತಗೊಳಿಸಲಾಗಿದೆ ಎಂದರು.