ಅಹಂ ಸಾಧನೆಗಾಗಿ ಪರಿತ್ಯಕ್ತ ಗಂಡ-ಹೆಂಡತಿ ಯಾವ ಮಟ್ಟಕ್ಕೂ ಹೋಗಬಲ್ಲರು: ಬಾಂಬೆ ಹೈಕೋರ್ಟ್
ಬಾಂಬೆ ಹೈಕೋರ್ಟ್ | PTI
ಹೊಸದಿಲ್ಲಿ ವೈವಾಹಿಕ ವಿವಾದಗಳಲ್ಲಿ ಸಿಲುಕಿಕೊಂಡಿರುವ ವ್ಯಕ್ತಿಗಳು ತಮ್ಮ ಅಹಂ ಸಾಧನೆಗಾಗಿ ಯಾವ ಮಟ್ಟಕ್ಕೂ ಹೋಗಬಲ್ಲರು ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ತನ್ನ ಮಗುವಿನ ಜನನ ದಾಖಲೆಯಲ್ಲಿ ಹೆತ್ತವರಾಗಿ ತನ್ನ ಹೆಸರನ್ನು ಮಾತ್ರ ದಾಖಲಿಸಬೇಕು ಎಂದು ಕೋರಿ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸುತ್ತಾ ನ್ಯಾಯಾಲಯ ಈ ಮಾತನ್ನು ಹೇಳಿದೆ.
ಮಗುವಿನ ಜನನ ದಾಖಲೆಗೆ ಸಂಬಂಧಿಸಿ ಹೆತ್ತವರು ಯಾವುದೇ ಅಧಿಕಾರವನ್ನು ಚಲಾಯಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ನ ಔರಂಗಾಬಾದ್ ಪೀಠದ ನ್ಯಾಯಮೂರ್ತಿಗಳಾದ ಮಂಗೇಶ್ ಪಾಟೀಲ್ ಮತ್ತು ವೈ.ಜಿ. ಖೋಬ್ರಗಡೆ ಮಾರ್ಚ್ 28ರ ಆದೇಶದಲ್ಲಿ ಹೇಳಿದರು.
ವೈವಾಹಿಕ ವಿವಾದವು ಹಲವು ವ್ಯಾಜ್ಯಗಳ ಉಗಮಕ್ಕೆ ಹೇಗೆ ಕಾರಣವಾಗುತ್ತದೆ ಎನ್ನುವುದಕ್ಕೆ ಈ ಅರ್ಜಿಯೇ ಒಂದು ಉದಾಹರಣೆ ಎಂದು ಹೇಳಿದ ನ್ಯಾಯಾಲಯವು, ಅರ್ಜಿದಾರರಿಗೆ 5,000 ರೂ. ದಂಡ ವಿಧಿಸಿತು. ಈ ಅರ್ಜಿಯು ನ್ಯಾಯಾಲಯದ ಪ್ರಕ್ರಿಯೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಮತ್ತು ನ್ಯಾಯಾಲಯದ ಅಮೂಲ್ಯ ಸಮಯದ ದುರುಪಯೋಗವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ತನ್ನ ಮಗುವಿನ ಜನನ ದಾಖಲೆಯಲ್ಲಿ ಹೆತ್ತವರಾಗಿ ತನ್ನ ಹೆಸರನ್ನು ಮಾತ್ರ ದಾಖಲಿಸಬೇಕು ಎಂಬುದಾಗಿ ಔರಂಗಾಬಾದ್ ಮುನಿಸಿಪಲ್ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ 38 ವರ್ಷದ ಮಹಿಳೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
‘‘ತನ್ನ ಅಹಂ ಸಾಧನೆಗೆ ಮುಂದಾಗಿರುವ ಮಹಿಳೆಯು ತನ್ನ ಮಗುವಿನ ಹಿತಾಸಕ್ತಿಗಳ ಬಗ್ಗೆಯೂ ಚಿಂತಿಸುತ್ತಿಲ್ಲ. ಮಗುವಿನ ಹಿತಾಸಕ್ತಿ ಅತ್ಯಂತ ಮಹತ್ವದ್ದಾಗಿದೆ. ತನ್ನ ಮಗುವನ್ನು ಒಂದು ಸೊತ್ತು ಎಂಬಂತೆ ಪರಿಗಣಿಸುವ ಮಟ್ಟಕ್ಕೂ ತಾನು ಹೋಗಬಲ್ಲೆ ಎನ್ನುವುದನ್ನು ಈ ಮಹಿಳೆಯು ತನ್ನ ಅರ್ಜಿಯಲ್ಲಿ ಸಾಬೀತುಪಡಿಸಿದ್ದಾರೆ. ಈ ಮೂಲಕ ಮಗುವಿನ ಹಿತಾಸಕ್ತಿಯನ್ನು ಕಡೆಗಣಿಸಿದ್ದಾರೆ’’ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.