7/11ದಾಳಿಯ ದೋಷಿಗೆ ಕಾನೂನು ಪದವಿಯ ಪ್ರಶ್ನೆ ಪತ್ರಿಕೆಗೆ ಜೈಲಿನಿಂದಲೇ ಉತ್ತರಿಸಲು ಅವಕಾಶ ನೀಡಿದ ಬಾಂಬೆ ಹೈಕೋರ್ಟ್
ಬಾಂಬೆ ಹೈಕೋರ್ಟ್ | PC ; PTI
ಮುಂಬೈ: 7/11 ಸರಣಿ ಬಾಂಬ್ ಸ್ಫೋಟದ ದೋಷಿಗೆ ನಾಶಿಕ್ ಕೇಂದ್ರೀಯ ಜೈಲಿನಿಂದಲೇ ಕಾನೂನು ಪದವಿಯ ಎರಡನೆ ಸೆಮಿಸ್ಟರ್ ನ ಒಂದು ಪ್ರಶ್ನೆ ಪತ್ರಿಕೆಗೆ ಉತ್ತರಿಸಲು ಸೋಮವಾರ ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ.
ಮೇ 3ರಿಂದ ಮೇ 14ರವರೆಗೆ ದಕ್ಷಿಣ ಮುಂಬೈನ ಸಿದ್ಧಾರ್ಥ ಕಾನೂನು ಕಾಲೇಜಿನಲ್ಲಿ ನಡೆದಿದ್ದ ಕಾನೂನು ವಿಷಯದ ಎರಡನೆ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಲು ದೋಷಿ ಮುಹಮ್ಮದ್ ಸಾಜಿದ್ ಮಾರ್ಘೂಬ್ ಅನ್ಸಾರಿ ನ್ಯಾಯಾಲಯದ ಅನುಮತಿ ಕೋರಿದ್ದ.
ಮೇ 10ರಂದು ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದ್ದ ಅನ್ಸಾರಿ, ನನ್ನನ್ನು ಸರಿಯಾದ ಸಮಯಕ್ಕೆ ಕಾಲೇಜಿಗೆ ಹಾಜರುಪಡಿಸದೆ ಇದ್ದುದರಿಂದ ನಾನು ಪರೀಕ್ಷೆಗೆ ಹಾಜರಾಗಲು ಸಾಧ್ಯಾವಾಗಲಿಲ್ಲ ಎಂದು ದೂರಿದ್ದ. ಈ ಆರೋಪಕ್ಕೆ ಉತ್ತರಿಸಿದ್ದ ಜೈಲು ಪ್ರಾಧಿಕಾರಗಳು, ಪ್ರಾಮಾಣಿಕ ಪ್ರಯತ್ನಗಳ ಹೊರತಾಗಿಯೂ ಆತನನ್ನು ಕಾಲೇಜಿಗೆ ಸಕಾಲದಲ್ಲಿ ಹಾಜರುಪಡಿಸಲು ಸಾಧ್ಯವಾಗಲಿಲ್ಲವೆಂದು ಸ್ಪಷ್ಟೀಕರಣ ನೀಡಿದ್ದವು.
ಇದಾದ ನಂತರ, ಒಂದು ವೇಳೆ ಅನ್ಸಾರಿಯೇನಾದರೂ ಆನ್ ಲೈನ್ ಪರೀಕ್ಷೆ ತೆಗೆದುಕೊಳ್ಳಬಹುದೇ ಎಂಬುದನ್ನು ಪರಿಶೀಲಿಸಿ ಎಂದು ಮುಂಬೈ ವಿಶ್ವವಿದ್ಯಾಲಯಕ್ಕೆ ಹೈಕೋರ್ಟ್ ಸೂಚಿಸಿತ್ತು. ಈ ಕುರಿತು ಸೋಮವಾರ ನ್ಯಾಯಾಲಯಕ್ಕೆ ಉತ್ತರಿಸಿರುವ ವಿಶ್ವವಿದ್ಯಾಲಯದ ವಕೀಲ ರೂಯಿ ರೋಡ್ರಿಗಸ್, ಬಾಕಿ ಉಳಿದಿರುವ ಒಂದು ಪ್ರಶ್ನೆ ಪತ್ರಿಕೆಗೆ ಹಾಜರಾಗಲು ಪ್ರಶ್ನೆ ಪತ್ರಿಕೆಯನ್ನು ಜೈಲಿನ ಇಮೇಲ್ ವಿಳಾಸ ಹಾಗೂ ಜೈಲು ಅಧೀಕ್ಷಕರ ಇಮೇಲ್ ವಿಳಾಸಕ್ಕೆ ರವಾನಿಸಿ, ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲಾಗುವುದು ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.
ಜುಲೈ 11, 2006ರಂದು ಪಶ್ಚಿ ಮ ಉಪನಗರ ರೈಲುಗಳ ಮೇಲೆ ನಡೆದಿದ್ದ ಸರಣಿ ಬಾಂಬ್ ದಾಳಿಯಲ್ಲಿ 189 ಮಂದಿ ಮೃತಪಟ್ಟು, 824 ಪ್ರಯಾಣಿಕರು ಗಾಯಗೊಂಡಿದ್ದರು. ಈ ಸ್ಫೋಟ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು ಅನ್ಸಾರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.