"ಇದು ಅವಳ ಜೀವನ": ಮುಸ್ಲಿಂ ಯುವಕನೊಂದಿಗೆ ʼಲಿವ್-ಇನ್ʼ ಸಂಬಂಧದಲ್ಲಿದ್ದ ಹಿಂದೂ ಯುವತಿಗೆ ಸ್ವಯಂ ನಿರ್ಧಾರ ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟ ಬಾಂಬೆ ಹೈಕೋರ್ಟ್
ಬಾಂಬೆ ಹೈಕೋರ್ಟ್ (Photo: PTI)
ಹೊಸದಿಲ್ಲಿ: ಬಾಂಬೆ ಹೈಕೋರ್ಟ್ ಶುಕ್ರವಾರ ಮುಸ್ಲಿಂ ಯುವಕನೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದ ಹಿಂದೂ ಯುವತಿಗೆ ಆಕೆಯ ಪೋಷಕರು ಮಾಡಿರುವ ಬಲವಂತದ ಆರೋಪದ ಹೊರತಾಗಿಯೂ ʼಇದು ಅವಳ ಜೀವನʼ ಎಂದು ತನ್ನ ಭವಿಷ್ಯವನ್ನು ತಾನೇ ನಿರ್ಣಯಿಸಲು ಆಕೆಗೆ ಅನುಮತಿ ನೀಡಿದೆ.
ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ಮಂಜುಷಾ ದೇಶಪಾಂಡೆ ಅವರ ಪೀಠವು ಯುವತಿಯನ್ನು ಪೋಷಕರ ಜೊತೆ ಕಳುಹಿಸಿಕೊಡದೆ ಆಕೆಯ ಇಚ್ಛೆಯಂತೆ ಮುಂದುವರಿಯಲು ಅವಕಾಶವನ್ನು ಮಾಡಿಕೊಟ್ಟಿದೆ. ʼಅವಳು ಬಯಸಿದ್ದನ್ನು ಮಾಡಲಿ. ಇದು ಅವಳ ಜೀವನ, ನಾವು ಅವಳಿಗೆ ಹಾರೈಸಬಹುದಷ್ಟೇ ಎಂದು ನ್ಯಾಯಾಲಯವು ಮೌಖಿಕವಾಗಿ ಹೇಳಿದೆ. ನಾವು ಅವಳನ್ನು ಪೋಷಕರ ಬಳಿಗೆ ಹೋಗಲು ಕೇಳಿದ್ದೆವು, ಅವಳು ಸಿದ್ಧವಾಗಿಲ್ಲ, ಅವಳು ತನ್ನ ಯೋಗಕ್ಷೇಮದ ಬಗ್ಗೆ ಪ್ರಜ್ಞೆ ಹೊಂದಿದ್ದರೆ, ಯಾವುದೇ ಸಮಸ್ಯೆ ಇಲ್ಲ ಎಂದು ನ್ಯಾಯಾಲಯ ಹೇಳಿದೆ.
ಯುವತಿ ಮುಸ್ಲಿಂ ಯುವಕನೊಂದಿಗೆ ಜೀವಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಆಕೆಯ ಪೋಷಕರು, ಬಜರಂಗದಳದ ಸದಸ್ಯರು ಮತ್ತು ಇತರರು ದೂರು ನೀಡಿದ ಹಿನ್ನೆಲೆ ಆಕೆಯನ್ನು ಚೆಂಬೂರಿ ಸರಕಾರಿ ಮಹಿಳಾ ವಸತಿ ನಿಲಯಕ್ಕೆ ಕಳುಹಿಸಲಾಗಿದೆ.
ಆದರೆ ಮುಸ್ಲಿಂ ಯುವಕ ಚೆಂಬೂರಿನಲ್ಲಿ ಸರ್ಕಾರ ನಡೆಸುತ್ತಿರುವ ಆಶ್ರಯ ಮನೆಯಿಂದ ತನ್ನ ಸಂಗಾತಿಯನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾನೆ.