ಇರುವೆಯನ್ನು ಕೊಲ್ಲಲು ಸುತ್ತಿಗೆ ತರಲು ಸಾಧ್ಯವಿಲ್ಲ: ಕೇಂದ್ರದ ನೂತನ ಐಟಿ ನಿಯಮಗಳ ಕುರಿತು ಬಾಂಬೆ ಹೈಕೋರ್ಟ್
Photo: PTI
ಮುಂಬೈ: ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ನಕಲಿ ಸುದ್ದಿಗಳ ತಡೆ ಕುರಿತು ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿರುವ ಬಗ್ಗೆ ಬಾಂಬೆ ಹೈಕೋರ್ಟ್, "ಈ ನಿಯಮಗಳು ಮಿತಿ ಮೀರಿದ್ದು, ಇರುವೆಯನ್ನು ಕೊಲ್ಲಲು ಸುತ್ತಿಗೆಯನ್ನು ತರಲು ಸಾಧ್ಯವಿಲ್ಲ" ಎಂದು ವ್ಯಂಗ್ಯವಾಡಿದೆ.
ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ನೀಲಾ ಗೋಖಲೆ ಅವರ ವಿಭಾಗೀಯ ಪೀಠವು, "ಈ ನಿಯಮಗಳಿಗೆ ತಿದ್ದುಪಡಿ ಮಾಡುವ ಹಿಂದಿನ ಅಗತ್ಯವನ್ನು ಇನ್ನೂ ಅರ್ಥಮಾಡಿಕೊಳ್ಳಲಾಗಿಲ್ಲ ಮತ್ತು ನಕಲಿ, ಸುಳ್ಳು ಯಾವುದು ಎಂಬುದನ್ನು ನಿರ್ಧರಿಸಲು ಸರ್ಕಾರದ ಒಂದು ಪ್ರಾಧಿಕಾರಕ್ಕೆ ಸಂಪೂರ್ಣ ಅಧಿಕಾರವನ್ನು ನೀಡುವುದು ಕಷ್ಟಕರವಾಗಿದೆ ಎಂದು ಹೇಳಿದೆ.
"ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ, ಸರ್ಕಾರವು ನಾಗರಿಕರಷ್ಟೇ ಸಹಭಾಗಿತ್ವವನ್ನು ಹೊಂದಿದೆ. ಆದ್ದರಿಂದ ನಾಗರಿಕರು ಪ್ರಶ್ನಿಸುವ ಮತ್ತು ಉತ್ತರಗಳನ್ನು ಕೇಳುವ ಮೂಲಭೂತ ಹಕ್ಕನ್ನು ಹೊಂದಿದ್ದಾರೆ. ಈ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಸರ್ಕಾರವು ಕರ್ತವ್ಯ ಬದ್ಧವಾಗಿದೆ" ಎಂದು ನ್ಯಾಯಾಲಯ ಹೇಳಿದೆ.
ತಿದ್ದುಪಡಿ ಮಾಡಿರುವ ಐಟಿ ನಿಯಮಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಪೀಠ ನಡೆಸುತ್ತಿದೆ. ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಮ್ರಾ, ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಮತ್ತು ಅಸೋಸಿಯೇಷನ್ ಆಫ್ ಇಂಡಿಯನ್ ಮ್ಯಾಗಝಿನ್ ಗಳು ನಿಯಮ ತಿದ್ದುಪಡಿಯ ವಿರುದ್ಧ ಹೈಕೋರ್ಟ್ನಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದರು. ಈ ನಿಯಮ ಅಂಸಾಂವಿಧಾನಿಕವಾಗಿದ್ದು, ನಾಗರಿಕರ ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ತಿದ್ದುಪಡಿ ಮಾಡಿದ ನಿಯಮಗಳ ಅಡಿಯಲ್ಲಿ ಸ್ಥಾಪಿಸಲಿರುವ ಫ್ಯಾಕ್ಟ್ ಚೆಕಿಂಗ್ ಯುನಿಟ್ (ಎಫ್ಸಿಯು) ಅನ್ನು ಯಾರು ಫ್ಯಾಕ್ಟ್ ಚೆಕ್ ಮಾಡುತ್ತಾರೆ? ಎಂದು ನ್ಯಾಯಾಲಯ ಪ್ರಶ್ನಿಸಿದೆ. "ಈ ತಿದ್ದುಪಡಿಯ ಹಿಂದಿರುವ ನಿಜವಾದ ಕಾಳಜಿ ಏನು? ಇದರ ಹಿಂದಿರುವ ಆತಂಕವೇನು? ನನಗೆ ಇನ್ನೂ ತಿಳಿದಿಲ್ಲ" ಎಂದು ನ್ಯಾಯಮೂರ್ತಿ ಪಟೇಲ್ ಹೇಳಿದರು.