ನವಾಬ್ ಮಲಿಕ್ ವೈದ್ಯಕೀಯ ಜಾಮೀನು ಅರ್ಜಿ ತಿರಸ್ಕರಿಸಿದ ಬಾಂಬೆ ಉಚ್ಚ ನ್ಯಾಯಾಲಯ
Bombay High Court | Photo: PTI
ಮುಂಬೈ: ದೇಶಭ್ರಷ್ಟ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಭಾಗಿಯಾಗಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ ನವಾಬ್ ಮಲಿಕ್ ಅವರ ವೈದ್ಯಕೀಯ ಜಾಮೀನು ಅರ್ಜಿಯನ್ನು ಬಾಂಬೆ ಉಚ್ಚ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.
ಎನ್ಸಿಪಿ ನಾಯಕರಾಗಿರುವ ನವಾಬ್ ಮಲಿಕ್ ಅವರನ್ನು ಜಾರಿ ನಿರ್ದೇಶನಾಲಯ 2022 ಫೆಬ್ರವರಿ 23ರಂದು ಬಂಧಿಸಿತ್ತು. ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ ಹಾಗೂ ಪ್ರಸಕ್ತ ಮುಂಬೈಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಜಾಮೀನು ಅರ್ಜಿಯನ್ನು ಕೆಳ ನ್ಯಾಯಾಲಯ ನವೆಂಬರ್ನಲ್ಲಿ ತಿರಸ್ಕರಿಸಿತ್ತು. ತಾನು ದೀರ್ಘ ಕಾಲದ ಮೂತ್ರ ಪಿಂಡದ ಕಾಯಿಲೆ ಹಾಗೂ ಇತರ ಕಾಯಿಲೆಗಳಿಂದ ಬಳಲುತ್ತಿದ್ದೇನೆ.
ಆದುದರಿಂದ ತನಗೆ ಜಾಮೀನು ನೀಡುವಂತೆ ಕೋರಿ ನವಾಬ್ ಮಲಿಕ್ ಅವರು ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅವರು ನಿಯಮಿತ ಜಾಮೀನು ಅರ್ಜಿಯನ್ನು ಕೂಡ ಸಲ್ಲಿಸಿದ್ದರು. ನ್ಯಾಯಮೂರ್ತಿ ಅನುಜಾ ಪ್ರಭುದೇಸಾಯಿ ಅವರು ಗುರುವಾರ ನವಾಬ್ ಮಲಿಕ್ ಅವರ ವೈದ್ಯಕೀಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಅಲ್ಲದೆ, ನವಾಬ್ ಮಲಿಕ್ ಅವರ ನಿಯಮಿತ ಜಾಮೀನು ಅರ್ಜಿಯನ್ನು ಎರಡು ವಾರಗಳ ಒಳಗೆ ವಿಚಾರಣೆ ನಡೆಸಲಿದ್ದೇವೆ ಎಂದು ಹೇಳಿದರು. ತನ್ನ ಆರೋಗ್ಯ ಡಿಸೆಂಬರ್ನಿಂದ ಹದಗೆಡುತ್ತಿದೆ. ತಾನು ದೀರ್ಘಕಾಲದ ಮೂತ್ರ ಪಿಂಡ ಕಾಯಿಲೆಯ 2ರಿಂದ 3ನೇ ಹಂತದ ನಡುವೆ ಇದ್ದೇನೆ ಎಂದು ನವಾಬ್ ಮಲಿಕ್ ಅವರು ವೈದ್ಯಕೀಯ ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ನವಾಬ್ ಮಲಿಕ್ ಅವರನ್ನು ಪ್ರತಿನಿಧಿಸಿದ್ದ ನ್ಯಾಯವಾದಿ ಅಮಿತ್ ದೇಸಾಯಿ ಅದಕ್ಕಿಂತ ಮೊದಲು, ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ಆಗ್ರಹಿಸಿದರು. ಆದರೆ, ಜಾರಿ ನಿರ್ದೇಶನಾಲಯ ಜಾಮೀನಿಗೆ ವಿರೋಧ ವ್ಯಕ್ತಪಡಿಸಿತು. ನವಾಬ್ ಮಲಿಕ್ ಅವರ ಆಯ್ಕೆಯಂತೆ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿತು.