ಕಾರು ಅಪಘಾತ : ಬಾಲಕನ ಸಾವಿಗೆ ʼಏರ್ ಬ್ಯಾಗ್ʼ ಕಾರಣ!
Photo credit: NDTV
ಮುಂಬೈ : ಕಾರು ಅಪಘಾತದ ವೇಳೆ ಆರು ವರ್ಷದ ಬಾಲಕನೋರ್ವ ʼಏರ್ ಬ್ಯಾಗ್ʼ ಬಡಿದ ಕಾರಣದಿಂದ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಹರ್ಷ್ ಮಾವ್ಜಿ ಅರೆಥಿಯಾ(6) ಮೃತ ಬಾಲಕ. ಹರ್ಷ್ ರವಿವಾರ ತನ್ನ ತಂದೆ ಮತ್ತು ಇಬ್ಬರು ಸೋದರಸಂಬಂಧಿಗಳೊಂದಿಗೆ ಪಾನಿಪುರಿ ತಿನ್ನಲು ತೆರಳಿದ್ದ ವೇಳೆ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಮುಂಭಾಗದ ಪ್ರಯಾಣಿಕರ ಸೀಟಿನಲ್ಲಿ ಕುಳಿತಿದ್ದ ಬಾಲಕ ಕಾರಿನ ʼಏರ್ ಬ್ಯಾಗ್ʼ ಕಾರಣದಿಂದಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ವಾಶಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸಂಜಯ್ ಘುಮಾಲ್, ಡಿಸೆಂಬರ್ 21ರಂದು ರಾತ್ರಿ 11.30ರ ಸುಮಾರಿಗೆ ಕಾರೊಂದು ಡಿವೈಡರ್ ಗೆ ಢಿಕ್ಕಿ ಹೊಡೆದಿತ್ತು. ಹಿಂದೆ ಬಂದ ಇನ್ನೊಂದು ಕಾರು ಮೊದಲ ಕಾರಿಗೆ ಢಿಕ್ಕಿ ಹೊಡೆದಾಗ ಆ ಕಾರಿನ ʼಏರ್ ಬ್ಯಾಗ್ʼ ತೆರೆದುಕೊಂಡು ಬಾಲಕನಿಗೆ ಬಡಿದಿದೆ ಎಂದು ಹೇಳಿದ್ದಾರೆ.
ʼಘಟನೆ ಬಳಿಕ ಬಾಲಕನನ್ನು ಆಸ್ಪತ್ರೆಗೆ ಸೇರಿಸಿದರೂ ಆತ ಬದುಕುಳಿಯಲಿಲ್ಲ, ಬಾಲಕನ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿರಲಿಲ್ಲ ಎಂದು ವೈದ್ಯರು ದೃಢಪಡಿಸಿದ್ದಾರೆ. ಆದ್ದರಿಂದ ಅಪಘಾತದ ವೇಳೆ ಉಂಟಾಗಿರುವ ಆಘಾತದಿಂದ ಸಾವನ್ನಪ್ಪಿರುವ ಶಂಕೆ ಇದೆʼ ಮತ್ತೋರ್ವ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.