ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಿಂದಿನ ‘ಮಿದುಳು’ ಸಂಜೀವ್ ಮುಖಿಯಾ ಯಾರು?
PC : indianexpress.com
ಹೊಸದಿಲ್ಲಿ : ಬಿಹಾರದ ಆರ್ಥಿಕ ಅಪರಾಧಗಳ ಘಟಕದ ತನಿಖಾಧಿಕಾರಿಗಳು ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿದಾಗ ಸಂಜೀವ್ ಕುಮಾರ್ ‘ಮುಖಿಯಾ’ ಎಂಬಾತನನ್ನು ಮುಖ್ಯವಾಗಿ ಹೆಸರಿಸಿದ್ದಾರೆ. ಈತ ಇಡೀ ಕಾರ್ಯಾಚರಣೆಯ ಹಿಂದಿನ ‘ಮಿದುಳು’ ಎಂದು ತನಿಖಾಧಿಕಾರಿಗಳು ನಂಬಿದ್ದಾರೆ.
ಈಗ ‘ಸಾಲ್ವರ್ ಗ್ಯಾಂಗ್’ ಎಂದು ಕರೆಯಲ್ಪಡುತ್ತಿರುವ, ಹಣವನ್ನು ನೀಡಿದವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಸಿದ್ಧ ಉತ್ತರಗಳೊಂದಿಗೆ ಮಾರಾಟಮಾಡಿದ್ದ ಅಂತರರಾಜ್ಯ ಜಾಲದ ಮುಖ್ಯಸ್ಥನಾಗಿರುವ ಮುಖಿಯಾ (51) ಐದು ಪ್ರಮುಖ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಲಾಗಿದೆ. ಇವುಗಳಲ್ಲಿ ಬಿಹಾರದ ಶಿಕ್ಷಕರ ನೇಮಕಾತಿ ಪರೀಕ್ಷೆಯೂ ಸೇರಿದ್ದು, ಈ ಹಿಂದೆ ಈ ಪ್ರಕರಣದಲ್ಲಿ ಮುಖಿಯಾನ ಪುತ್ರ ಡಾ.ಶಿವ ಅಲಿಯಾಸ್ ಬಿಟ್ಟುವನ್ನು ಬಂಧಿಸಲಾಗಿತ್ತು.
ಸ್ಥಳೀಯ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿರುವ ನಲಂದಾ ನಿವಾಸಿ ಮುಖಿಯಾ ಪ್ರಸ್ತುತ ತಲೆ ಮರೆಸಿಕೊಂಡಿದ್ದಾನೆ. ಈ ಪ್ರಕರಣವಿನ್ನೂ ವಿಚಾರಣೆಗೆ ಬರಬೇಕಿದೆ.
ಮುಖಿಯಾನ ಪತ್ನಿ 2016 ಮತ್ತು 2021ರ ನಡುವೆ ನಲಂದಾದ ಭುಟಾಹಖರ್ ಗ್ರಾಮ ಪಂಚಾಯಿತಿಯ ಅಧ್ಯಕ್ಷೆಯಾಗಿದ್ದಳು. ಹೀಗಾಗಿ ಈತನನ್ನು ‘ಮುಖಿಯಾ’ ಎಂದು ಕರೆಯಲಾಗುತ್ತಿದೆ. ಈತ ಕಳೆದ ಎರಡು ದಶಕಗಳಿಗೂ ಅಧಿಕ ಸಮಯದಿಂದ ಪ್ರಶ್ನೆಪತ್ರಿಕೆ ಸೋರಿಕೆ ದಂಧೆಯಲ್ಲಿ ತೊಡಗಿಕೊಂಡಿದ್ದಾನೆ ಎನ್ನಲಾಗಿದೆ. 1990ರ ದಶಕದಲ್ಲಿ ಮತ್ತು 2000ರ ದಶಕದ ಆರಂಭದಲ್ಲಿ ಹಲವಾರು ಪರೀಕ್ಷೆ ವಂಚನೆ ಜಾಲಗಳಲ್ಲಿ ಭಾಗಿಯಾಗಿದ್ದ ರಂಜಿತ್ ಡಾನ್ ಗೆ ಸಹಾಯಕನಾಗಿದ್ದ ಮುಖಿಯಾ ಬಳಿಕ ತನ್ನದೇ ದಂಧೆಯನ್ನು ಆರಂಭಿಸಿದ್ದ.
ಪೋಲಿಸ್ ಮೂಲಗಳ ಪ್ರಕಾರ ನಲಂದಾದ ನೂರ್ಸರಾಯ್ ನ ಉದ್ಯಾನ ವಿದ್ಯಾಲಯದಲ್ಲಿ 10 ವರ್ಷಗಳಿಗೂ ಹೆಚ್ಚು ಕಾಲದಿಂದ ತಾಂತ್ರಿಕ ಸಹಾಯಕನಾಗಿದ್ದ ಮುಖಿಯಾ ಬಿಹಾರದ ಒಳಗೆ ಮತ್ತು ಹೊರಗೆ ಕನಿಷ್ಠ ನಾಲ್ಕು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಹೆಸರಿಸಲ್ಪಟ್ಟಿದ್ದಾನೆ.
ಮುಖಿಯಾ ಹಿಂದೆ ಎರಡು ಬಾರಿ ಬಂಧಿಲ್ಪಟ್ಟಿದ್ದ. ದಶಕದ ಹಿಂದೆ ಬಿಹಾರದಲ್ಲಿ ಬ್ಲಾಕ್ ಮಟ್ಟದ ಪರೀಕ್ಷೆ ಪ್ರಕರಣದಲ್ಲಿ ಮೊದಲ ಬಾರಿಗೆ ಬಂಧಿಸಲ್ಪಟ್ಟಿದ್ದ ಆತ 2016ರಲ್ಲಿ ಉತ್ತರಾಖಂಡದ ಕಾನ್ ಸ್ಟೇಬಲ್ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಇನ್ನೊಮ್ಮೆ ಕಂಬಿಗಳ ಹಿಂದೆ ತಳ್ಳಲ್ಪಟ್ಟಿದ್ದ.
ಮುಖಿಯಾನ ಪುತ್ರ ಶಿವನನ್ನು ಈ ವರ್ಷದ ಆರಂಭದಲ್ಲಿ ಬಿಹಾರದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಗಾಗಿ ಬಂಧಿಸಲಾಗಿತ್ತು. ಮುಖಿಯಾ ಕೂಡ ಪ್ರಕರಣದಲ್ಲಿ ಆರೋಪಿಯಾಗಿದ್ದರೂ ಆತನನ್ನು ಬಂಧಿಸಿರಲಿಲ್ಲ.
ತನಿಖಾಧಿಕಾರಿಗಳ ಪ್ರಕಾರ ನೀಟ್-ಯುಜಿ ಪರೀಕ್ಷೆ ನಡೆದಿದ್ದ ಮೇ 5ರಂದು ಬೆಳಿಗ್ಗೆ ಮುಖಿಯಾನ ಆಪ್ತ ಸಹಾಯಕ ಬಲದೇವ್ ಕುಮಾರ್ ಉತ್ತರಗಳ ಸಹಿತ ಪ್ರಶ್ನೆಪತ್ರಿಕೆಯ ಪಿಡಿಎಫ್ ಗಳನ್ನು ಸ್ವೀಕರಿಸಿದ್ದ. ಈ ಕೀ ಉತ್ತರಗಳನ್ನು ಅಭ್ಯರ್ಥಿಗಳಿಂದ ಕಂಠಪಾಠ ಮಾಡಿಸಲಾಗಿತ್ತು.
ಜಾರ್ಖಂಡ್ ನ ದೇವಗಡದಿಂದ ಬಂಧಿಸಲ್ಪಟ್ಟಿರುವ ಐವರು ‘ಸಾಲ್ವರ್ ಗ್ಯಾಂಗ್’ ಸದಸ್ಯರಲ್ಲಿ ಬಲದೇವ ಸೇರಿದ್ದಾನೆ.
ಮುಖಿಯಾ ರಾಜಕೀಯ ಸಂಪರ್ಕಗಳನ್ನೂ ಹೊಂದಿದ್ದಾನೆ. ತನಗಾಗಿ ಅಲ್ಲದಿದ್ದರೂ ತನ್ನ ಪತ್ನಿಗಾಗಿ ಆತ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದ.
2020ರ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮೊದಲು ಮುಖಿಯಾನ ಪತ್ನಿ ಮಮತಾ ದೇವಿ ಜೆಡಿಯು ತೊರೆದು ಎಲ್ ಜೆ ಪಿ ಅಭ್ಯರ್ಥಿಯಾಗಿ ನಲಂದಾದ ಹರ್ನೌತ್ನಿಂದ ಕಣಕ್ಕಿಳಿದಿದ್ದು, ಜೆಡಿಯು ಅಭ್ಯರ್ಥಿ ಹರಿ ನಾರಾಯಣ ಸಿಂಗ್ ಅವರೆದುರು ಪರಾಭವಗೊಂಡಿದ್ದಳು.