ಮೋದಿ ಬ್ರ್ಯಾಂಡ್ ಕಾಲಾವಧಿ ಮುಗಿದಿದೆ: ಸಂಜಯ್ ರಾವತ್ ವ್ಯಂಗ್ಯ
ಸಂಜಯ್ ರಾವತ್ (PTI)
ಮುಂಬೈ; ಮೋದಿ ಬ್ರ್ಯಾಂಡ್ ಕಾಲಾವಧಿ ಮುಗಿದಿದ್ದು, ಒಂದು ವೇಳೆ ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಪಕ್ಷಾಂತರ ಮಾಡಲು ನಿರ್ಧರಿಸಿದರೆ ಅವರಿಂದ ಏನು ಮಾಡಲು ಸಾಧ್ಯ? ಎಂದು ಶಿವಸೇನೆ(ಉದ್ಧವ್ ಠಾಕ್ರೆ ಬಣ)ದ ನಾಯಕ ಸಂಜಯ್ ರಾವತ್ ವ್ಯಂಗ್ಯವಾಡಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಜಯ್ ರಾವತ್, ಬಿಜೆಪಿಯು ತನ್ನ ಸ್ವಂತ ಬಲದ ಮೇಲೆ ಬಹುಮತ ಪಡೆದಿಲ್ಲ. ಬಿಜೆಪಿ ಕೇವಲ 235-240 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ ಎಂದ ಅವರು, ಬಿಜೆಪಿಯು ಸ್ವತಂತ್ರವಾಗಿ ಸರಕಾರ ರಚಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. “ಅವರು ಮೋದಿ ಸರಕಾರವನ್ನು ತರುವ ಕುರಿತು ಮಾತನಾಡುತ್ತಿದ್ದಾರೆ. ಎಲ್ಲಿದೆ ಮೋದಿ ಸರಕಾರ?” ಎಂದು ಪ್ರಶ್ನಿಸಿದ್ದಾರೆ.
ಎನ್ಡಿಎ ಮೈತ್ರಿಕೂಟದ ಆಧಾರ ಸ್ತಂಭಗಳಾದ ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಅವರ ನೆರವಿನೊಂದಿಗೆ ಸರಕಾರ ರಚಿಸಿದರೆ, ಅಂತಹ ಸರಕಾರ ಅಸ್ಥಿರವಾಗಿರಲಿದೆ ಹಾಗೂ ಯಾವ ಕ್ಷಣದಲ್ಲಿ ಬೇಕಾದರೂ ಪತನವಾಗಬಹುದು ಎಂದೂ ಎಚ್ಚರಿಸಿದ್ದಾರೆ.
“ಬಿಜೆಪಿಯು ಇಷ್ಟು ಸ್ಥಾನಗಳನ್ನು ಸಿಬಿಐ, ಈಡಿ ಹಾಗೂ ಆದಾಯ ತೆರಿಗೆ ಇಲಾಖೆಗಳ ನೆರವಿನಿಂದ ಗಳಿಸಿದೆ” ಎಂದೂ ವ್ಯಂಗ್ಯವಾಡಿದ ಅವರು, ಒಂದು ವೇಳೆ ಬಿಜೆಪಿಗೆ ಅಗತ್ಯ ಬೆಂಬಲವಿದ್ದರೆ ಸರಕಾರ ರಚಿಸಲು ಅಡ್ಡಿಯಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಇದು ಪ್ರಜಾಪ್ರಭುತ್ವವಾಗಿರುವುದರಿಂದ ಅವರೇನಾದರೂ ಸರಕಾರ ರಚಿಸಲು ಮುಂದಾದರೆ, ನಾವದನ್ನು ಸ್ವಾಗತಿಸುತ್ತೇವೆ. ಅವರಿಗೆ ಸರಕಾರ ರಚಿಸುವ ಹಕ್ಕಿದೆ ಎಂದೂ ಅವರು ಹೇಳಿದ್ದಾರೆ.
ಇದೇ ವೇಳೆ, ಜನರು ಇಂಡಿಯಾ ಮೈತ್ರಿಕೂಟಕ್ಕೆ 250 ಸ್ಥಾನಗಳನ್ನು ನೀಡಿದ್ದಾರೆ. ಹೀಗಾಗಿ ನಮಗೂ ಸರಕಾರ ರಚಿಸುವ ಜನಾದೇಶವಿದೆ ಎಂದು ಹೇಳುವ ಮೂಲಕ, ಇಂಡಿಯಾ ಮೈತ್ರಿಕೂಟವೂ ಸರಕಾರ ರಚನೆಯ ಹಕ್ಕು ಪ್ರತಿಪಾದಿಸಲಿದೆ ಎಂಬ ಸುಳಿವನ್ನು ಅವರು ನೀಡಿದ್ದಾರೆ.